ಇಮಾಮ್, ಮುಅದ್ಸಿನ್‌ರಿಗೆ ನಿವೃತ್ತಿ ವೇತನ ಯೋಜನೆ : ಅರ್ಜಿದಾರರ ವಯೋಮಿತಿ ಇಳಿಕೆ
ಮಂಗಳೂರು, ನ. 5: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಂಡ ಮಸೀದಿ, ಮದ್ರಸಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇಮಾಮ್ ಮತ್ತು ಮುಅದ್ಸಿನ್‌ರಿಗೆ ನೀಡಲಾಗುವ ನಿವೃತ್ತಿ ವೇತನ ಯೋಜನೆಯ ಅರ್ಜಿದಾರರ ವಯೋಮಿತಿಯನ್ನು ಇಳಿಕೆ ಮಾಡಲಾಗಿದೆ.
ಈ ಹಿಂದೆ ನೋಂದಾಯಿತ ಮಸೀದಿಗಳಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟು ಸೇವೆಗೈದು ಕೆಲಸದಿಂದ ನಿವೃತ್ತಿ ಹೊಂದಿ 65 ವರ್ಷ ಪೂರ್ತಿಗೊಳಿಸಿದ ಇಮಾಮ್ ಮತ್ತು ಮುಅದ್ಸಿನ್‌ರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಇದೀಗ ಅರ್ಜಿದಾರರ ವಯಸ್ಸಿನ ಮಿತಿಯನ್ನು 60ಕ್ಕೆ ಇಳಿಸಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ವೌಲಾನ ಶಾಫಿ ಸಅದಿ ಬೆಂಗಳೂರು ಅರ್ಜಿದಾರರ ವಯಸ್ಸಿನ ಮಿತಿಯನ್ನು 65 ಮಾಡಿದ ಕಾರಣ ಬಹುತೇಕ ಮಂದಿ ಈ ಯೋಜನೆಯಿಂದ ವಂಚಿತರಾಗುತ್ತಿರುವುದನ್ನು ಮನಗಂಡೆ. ತಕ್ಷಣ ವಕ್ಫ್ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಅದರಂತೆ 65 ಇದ್ದ ವಯಸ್ಸಿನ ಮಿತಿಯನ್ನು 60ಕ್ಕೆ ಇಳಿಸಲಾಗಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಇಮಾಮ್ ಮತ್ತು ಮುಅದ್ಸಿನರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ನೋಂದಣಿಗೊಂಡ ಮಸೀದಿ-ಮದ್ರಸಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ರಿಗೆ ಮಾಸಿಕ ಗೌರವ ಧನ ನೀಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ನಿವೃತ್ತಿ ಹೊಂದಿದ ಇಮಾಮ್/ಮುಅದ್ಸಿನ್‌ರಿಗೆ ನಿವೃತ್ತಿ ವೇತನ ಯೋಜನೆಯನ್ನು ರಾಜ್ಯ ವಕ್ಫ್ ಮಂಡಳಿಯ ಮೂಲಕ ರಾಜ್ಯ ಸರಕಾರ ಪ್ರಕಟಿಸಿದೆ.
ವಕ್ಫ್‌ನಲ್ಲಿ ನೋಂದಣಿಗೊಂಡ ಮಸೀದಿಗಳಲ್ಲಿ ಇಮಾಮ್ ಅಥವಾ ಮುಅದ್ಸಿನ್ ಆಗಿ ಕನಿಷ್ಟ 10 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು ನಿವೃತ್ತಿ ಹೊಂದಿ 60 ವರ್ಷ ಪ್ರಾಯ ಪೂರ್ತಿಗೊಂಡಿರಬೇಕು. ಅಂತಹವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಗೊಂಡ ಅರ್ಜಿದಾರರ ಪೈಕಿ ಇಮಾಮರಿಗೆ ಮಾಸಿಕ 2,000 ರೂ. ಮತ್ತು ಮುಅದ್ಸಿನ್‌ಗೆ 1,500 ರೂ. ನಿವೃತ್ತಿ ವೇತನ ನೀಡಲಾಗುತ್ತದೆ. ಈಗಾಗಲೆ ರಾಜ್ಯದ 195 ಇಮಾಮ್ ಮತ್ತು 226 ಮುಅದ್ಸಿನರಿಗೆ ಕ್ರಮವಾಗಿ 2 ಸಾವಿರ ರೂ. ಮತ್ತು 1,500 ರೂ.ವನ್ನು ಬಿಡುಗಡೆ ಮಾಡಲಾಗಿದೆ.
ಹೀಗೆ ಅರ್ಜಿ ಸಲ್ಲಿಸಬೇಕು
ಈ ಅರ್ಹತೆಯುಳ್ಳ ಇಮಾಮ್/ಮುಅದ್ಸಿನ್‌ರು ಅರ್ಜಿ ನಮೂನೆಯನ್ನು ಆಯಾ ಜಿಲ್ಲಾ ವಕ್ಫ್ ಕಚೇರಿಯಿಂದ ಪಡೆದುಕೊಂಡು ಆಧಾರ್ ಕಾರ್ಡ್‌ನ ನಕಲು ಪ್ರತಿ, ಅರ್ಜಿದಾರರ ಸೇವಾ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆದಾಯ ದೃಢೀಕರಣ ಪತ್ರ ಅಥವಾ ಬಿಪಿಎಲ್ ಕಾರ್ಡ್‌ನ ಪ್ರತಿ, ವಿದ್ಯಾಭ್ಯಾಸದ ಬಗ್ಗೆ ದೃಢೀಕರಣ ಪತ್ರ (ಧಾರ್ಮಿಕ ಮತ್ತು ಲೌಕಿಕ) ಇತ್ಯಾದಿ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ಆಯಾ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.







