ವಿದ್ಯುತ್ ದರ ಏರಿಕೆ: ಕಾಸಿಯಾ, ಎಫ್‍ಕೆಸಿಸಿಐ ಅಸಮಾಧಾನ

ಬೆಂಗಳೂರು, ನ.5: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಭಾರೀ ಸಂಕಷ್ಟಕ್ಕೆ ಸಿಲುಕಲಿವೆ. ದಿಢೀರ್ ಆಗಿ ದರ ಏರಿಕೆ ಮಾಡಿರುವುದು ನಮಗೆ ಆಘಾತವಾಗಿದೆ ಎಂದು ಕಾಸಿಯಾ ಹಾಗೂ ಎಫ್‍ಕೆಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೋನ ಸೇರಿ ಈಗಾಗಲೇ ಹಲವು ರೀತಿಯ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸಿ ನಷ್ಟದಲ್ಲಿ ಕಾರ್ಖಾನೆಗಳು ಮುಚ್ಚುವಂಥ ಪರಿಸ್ಥಿತಿ ಉಂಟಾಗುತ್ತಿದೆ. ಇದನ್ನು ರಾಜ್ಯ ಸರಕಾರ ಹಾಗೂ ಕೆಇಆರ್‍ಸಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರತಿ ವರ್ಷ ವಿದ್ಯುತ್ ದರ ಏರಿಸುವುದು ಉತ್ತಮ ಬೆಳವಣಿಗೆಯಲ್ಲ. ಅದರ ಬದಲಾಗಿ ಗುಣಮಟ್ಟ ಹಾಗೂ ನವೀಕೃತ ಇಂಧನಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟು ಉದ್ಯಮಗಳನ್ನು ಬೆಳೆಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಕಂಪೆನಿಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸೇವಾ ಕಂಪೆನಿಗಳು ಹಾಗೂ ಉತ್ಪದನಾ ಸಂಸ್ಥೆಗಳ ಮೇಲೆ ಹೊರೆ ಹೊರಿಸುವುದು ಸರಿಯಲ್ಲ. ಇದರಿಂದ, ಜನಸಾಮಾನ್ಯರೂ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಕೂಡಲೇ ವಿದ್ಯುತ್ ದರ ಹೆಚ್ಚಳ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸರಕಾರವನ್ನು ಕಾಸಿಯಾ ಅಧ್ಯಕ್ಷ ಅರಸಪ್ಪ ಒತ್ತಾಯಿಸಿದ್ದಾರೆ.





