ದ.ಕ. ಜಿಲ್ಲಾ ಕಾಂಗ್ರೆಸ್ ವಿಶೇಷ ಸಭೆ : ನ.9ರಂದು ಕೆಂಜಾರಿನಲ್ಲಿ ಪ್ರತಿಭಟನೆಗೆ ನಿರ್ಧಾರ
ಮಂಗಳೂರು, ನ.5: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಮಂಗಳೂರಿನ ಪ್ರತಿಷ್ಠಿತ ಬಜ್ಪೆವಿಮಾನ ನಿಲ್ದಾಣವನ್ನು ಖಾಸಗಿ ಸಂಸ್ಥೆಯಾದ ಅದಾನಿ ಗ್ರೂಪಿಗೆ ವಹಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ತೀವ್ರ ಹೋರಾಟವನ್ನು ನಡೆಸಲು ಉದ್ದೇಶಿಸಿದ್ದು, ನ.9ರಂದು ಕೆಂಜಾರಿ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ನಗರದ ಮಲ್ಲಿಕಟ್ಟೆಯಲ್ಲಿ ರುವ ದ.ಕ.ಜಿಲ್ಲಾ ಕಾಂಗ್ರೆಸ್ ಸಭಾಭವನದಲ್ಲಿ ಗುರುವಾರ ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿಶೇಷ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಂಡಿತ್ ಜವಾಹರ್‌ಲಾಲ್ ನೆಹರೂ, ಶ್ರೀನಿವಾಸ್ ಮಲ್ಯರ ದೂರದೃಷ್ಟಿತ್ವದಲ್ಲಿ ನಿರ್ಮಾಣಗೊಂಡ ಬಜ್ಪೆವಿಮಾನ ನಿಲ್ದಾಣವನ್ನು ಅದಾನಿ ಗ್ರೂಪಿಗೆ ಮಾರಾಟ ಮಾಡಿರುವುದು ಜಿಲ್ಲೆಗೆ ಬಗೆದ ದ್ರೋಹವಾಗಿದೆ. ಪರಿಶಿಷ್ಟ ವರ್ಗದವರು ಅಂದು ಕೊಡುಗೆಯಾಗಿ ನೀಡಿರುವ ಸ್ಥಳದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣವನ್ನು ಇಂದು ಅದಾನಿಗೆ ಮಾರಾಟ ಮಾಡಿದ್ದು, ವಿಜಯಾ ಬ್ಯಾಂಕನ್ನು ಗುಜರಾತ್ ಮೂಲದ ನಷ್ಟದಲ್ಲಿದ್ದ ಬರೋಡಾ ಬ್ಯಾಂಕ್ ಜೊತೆ ವಿಲೀನಗೊಳಿಸಿ ಸುಂದರ ರಾಮ್ ಶೆಟ್ಟಿಯ ಹೆಸರನ್ನು ಅಳಿಸಿ ಹಾಕಿರುವ ಮೋದಿ ಸರಕಾರದ ಜನವಿರೋಧಿ ನೀತಿಯನ್ನು ಜಿಲ್ಲೆಯ ಜನರು ಕ್ಷಮಿಸಲಾರರು ಎಂದು ರಮಾನಾಥ ರೈ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.