ಅಮೆರಿಕ ಅಧ್ಯಕ್ಷೀಯ ಚುನಾವಣೆ: ನಮ್ಮ ಗೆಲುವು ಖಚಿತ ಎಂದ ಜೋ ಬೈಡನ್

ವಿಲಿಂಗ್ಟನ್ (ಅಮೆರಿಕ), ನ. 5: ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾವಣೆಯಾದ ಎಲ್ಲ ಮತಗಳ ಎಣಿಕೆಯಾದ ಬಳಿಕ, ನಾನು ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಬುಧವಾರ ಹೇಳಿದ್ದಾರೆ. ಚುನಾವಣಾ ಫಲಿತಾಂಶವನ್ನು ನಿರ್ಧರಿಸುವ, ಇನ್ನುಳಿದ ಮಹತ್ವದ ರಾಜ್ಯಗಳಲ್ಲಿ ನಾನು ಡೊನಾಲ್ಡ್ ಟ್ರಂಪ್‌ಗಿಂತ ಮುಂದಿದ್ದೇನೆ ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.
‘‘ಮತ ಎಣಿಕೆಯ ಸುದೀರ್ಘ ರಾತ್ರಿಯ ಬಳಿಕ, ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಾದ 270 ಇಲೆಕ್ಟೋರಲ್ ಮತಗಳನ್ನು ತಲುಪಲು ನಾವು ಸಾಕಷ್ಟು ರಾಜ್ಯಗಳನ್ನು ಗೆಲ್ಲುತ್ತಿದ್ದೇವೆ’’ ಎಂದು ಡೆಲವೇರ್ ನಗರದ ತನ್ನ ತವರು ಪಟ್ಟಣ ವಿಲ್ಮಿಂಗ್ಟನ್‌ನಿಂದ ಟೆಲಿವಿಶನ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಬೈಡನ್ ಹೇಳಿದರು.
‘‘ನಾವು ಗೆದ್ದಿದ್ದೇವೆ ಎಂದು ಹೇಳಲು ನಾನು ಇಲ್ಲಿಗೆ ಬಂದಿಲ್ಲ. ಆದರೆ, ಮತ ಎಣಿಕೆ ಮುಗಿದಾಗ, ನಾವು ವಿಜಯಿಯಾಗುವ ವಿಶ್ವಾಸವಿದೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ’’ ಎಂದು ಬೈಡನ್ ಹೇಳಿದರು.
ಶಾಂತ ರೀತಿಯಲ್ಲಿ ಮಾತನಾಡಿದ ಅವರು, ‘‘ಪ್ರತಿಯೊಂದು ಮತವೂ ಎಣಿಕೆಯಾಗಬೇಕು’’ ಎಂದು ಹೇಳಿದರು.
‘‘ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ’’ ಎಂದು ಅವರು ನುಡಿದರು.
ಅವರ ಪಕ್ಕದಲ್ಲಿ ಅವರ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಇದ್ದರು.







