ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಮೈಸೂರು,ನ.5: ಪತ್ನಿ ಹಾಗು ಆಕೆಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತಿದ್ದಾರೆನ್ನಲಾದ ಪತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಟಿ.ಕೆ. ಬಡಾವಣೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಾಗರಾಜು (42) ಎಂದು ತಿಳಿದುಬಂದಿದೆ. ಇವರು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಹೆಂಡತಿ ಮತ್ತು ಆಕೆಯ ಮನೆಯವರು ತನಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿ ನಾಗರಾಜು ನೇಣಿಗೆ ಶರಣಾಗಿದ್ದು, ಈ ಸಂಬಂಧ ಈತನ ಪತ್ನಿ ಮಂಜುಳಾರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ನಾಗರಾಜು ನಂಜನಗೂಡಿನ ಮಂಜುಳಾ ಎಂಬವರನ್ನು ಕಳೆದ 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಇಬ್ಬರು ಮಕ್ಕಳಿರುವ ಸಂಸಾರ ಇವರದ್ದಾಗಿತ್ತು. ಇತ್ತೀಚೆಗೆ ಗಂಡ-ಹೆಂಡತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗ್ತಿದೆ. 'ನನ್ನ ಹೆಂಡತಿ ಹಾಗೂ ಆಕೆಯ ತಾಯಿ, ಭಾವ-ಮೈದುನರು ಮತ್ತು ಅಕೆಯ ಸ್ನೇಹಿತೆ ನನಗೆ ಹಿಂಸೆ ಕೊಡುತ್ತಿದ್ದಾರೆ. ನನ್ನ ಹೆಂಡತಿ, ಯಾವಾಗಲೂ ನೀನು ಚೆನ್ನಾಗಿ ಇಲ್ಲ, ಸತ್ತು ಹೋಗು, ನಿನ್ನ ಅಣ್ಣನನ್ನು ಮದುವೆಯಾಗುತ್ತೇನೆ. ನಿನ್ನ ಆಸ್ತಿಯಲ್ಲಿ ಭಾಗ ತೆಗೆದುಕೊಂಡು ಬಾ ಎಂದು ಹಿಂಸೆ ನೀಡುತ್ತಿದ್ದರು' ಎಂದು ನಾಗರಾಜು ವಿಡಿಯೋದಲ್ಲಿ ತಿಳಿಸಿ ನೇಣಿಗೆ ಶರಣಾಗಿದ್ದಾರೆ.
ಈ ವಿಡಿಯೋವನ್ನು ತನ್ನ ತಾಯಿ ಮೊಬೈಲ್‍ಗೆ ರವಾನೆ ಮಾಡಿದ್ದಾರೆ. ನಾಗರಾಜು ತಾಯಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ವಿಡಿಯೋ ಆಧರಿಸಿ ಆತನ ಪತ್ನಿ ಮಂಜುಳಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







