ಕೊರೋನ ಸೋಂಕಿನ ಪ್ರಮಾಣ ಇಳಿಕೆ: ರಸ್ತೆಗಿಳಿದ 320 ಕೆಎಸ್ಆರ್‌ಟಿಸಿ ಬಸ್‍ಗಳು

ಮೈಸೂರು,ನ.5: ಸಾಂಸ್ಕೃತಿಕ ನಗರಿ ಮೈಸೂರು ಸೇರಿ ರಾಜ್ಯಾದ್ಯಂತ ಕೊರೋನ ಅಬ್ಬರ ಕಡಿಮೆಯಾಗುತ್ತಿದ್ದು, ಈ ನಡುವೆ ಕೊರೋನ ಸೋಂಕಿನ ಪ್ರಮಾಣ ಇಳಿಕೆಯಾದ ಪರಿಣಾಮ ಮೈಸೂರು ನಗರ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಕೊರೋನ ಕಡಿಮೆಯಾಗುತ್ತಿದ್ದಂತೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವ ಹಿನ್ನೆಲೆ ಮೈಸೂರು ನಗರ ಸಾರಿಗೆ ಇದೀಗ ಚೇತರಿಕೆಯತ್ತ ಸಾಗಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ ನಗರದಲ್ಲಿ 320 ಬಸ್ ಗಳು ರಸ್ತೆಗಿಳಿದಿವೆ. ನಿತ್ಯ 1 ಲಕ್ಷದಿಂದ 1.20 ಲಕ್ಷ ಪ್ರಯಾಣಿಕರರು ಸಂಚಾರ ಮಾಡುತ್ತಿದ್ದು, ದಿನದ ಆದಾಯ 17.75 ಲಕ್ಷ ರೂ. ದಾಟಿದೆ.
ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಯಿಂದಾಗಿ ಆಹಾರ ಮೇಳ, ಯುವಸಂಭ್ರಮ, ದಸರಾ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿತ್ತು. ಇದರಿಂದಾಗಿ ಈ ಬಾರಿ ದಸರಾ ವೇಳೆ ನಿರೀಕ್ಷಿತ ಪ್ರಯಾಣಿಕರು ಸಂಚರಿಸಲಿಲ್ಲ. ಪ್ರತಿ ದಸರಾ ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಸಾರಿಗೆಗೆ ಲಾಭವಿತ್ತು. ಈ ಬಾರಿ ಕೋವಿಡ್ -19 ನಿಂದ ಸರಳ ದಸರಾ ಆಚರಣೆ ಮಾಡಲಾಯಿತು. ಈ ವೇಳೆ ಪ್ರಯಾಣಿಕರು ಸ್ವಂತ ವಾಹನ ಹೆಚ್ಚಾಗಿ ಬಳಸಿದ್ದು ಇದರಿಂದ ನಗರ ಸಾರಿಗೆಗೆ ಯಾವುದೇ ಲಾಭವಾಗಲಿಲ್ಲ.
ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಪ್ರತಿಕ್ರಿಯಿಸಿ, ಇದೀಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಲಾಕ್ಡೌನ್ ಗೂ ಮೊದಲು ಪ್ರತಿದಿನ 32 ಲಕ್ಷದವರೆಗೆ ವರಮಾನ ಇತ್ತು. ಕೋವಿಡ್ 19 ನಿಂದ ಸಂಚಾರ ಸ್ಥಗಿತವಾಗಿ, ಈಗೀಗ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಎಂದಿನಂತೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಕೊರೋನ ಬಗ್ಗೆ ಜಾಗೃತರಾಗಿರುವಂತೆ ಕ್ರಮ ವಹಿಸಲಾಗಿದೆ. ಬಸ್ ಗಳಲ್ಲಿ ಮಾಸ್ಕ್ ಇಲ್ಲದೆ ಪ್ರಯಾಣ ಮಾಡಲು ಅವಕಾಶ ನೀಡಲಾಗಿಲ್ಲ. ಇನ್ನು ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.







