ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್ ಮೇಲುಗೈ
ಮಂಡ್ಯ, ನ.5: ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಡಿಸಿಸಿ)ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 12 ನಿರ್ದೇಶಕ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿಗಳು ಹಾಗೂ ಜೆಡಿಎಸ್ ಬೆಂಬಲಿತ 5 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಮೂರು ನಿರ್ದೇಶಕ ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, 9 ಸ್ಥಾನಗಳಿಗೆ ಗುರುವಾರ ಬೆಳಗ್ಗೆ 9 ರಿಂದ ಸಂಜೆ 4ರವೆಗೆ ಚುನಾವಣೆ ನಡೆಯಿತು. ನಂತರ, ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಮುನ್ನೆಚ್ಚರಿಕೆಯಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ತಾಲೂಕು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಕ್ಷೇತ್ರಗಳ ಪೈಕಿ ಮಳವಳ್ಳಿ ತಾಲೂಕಿನಿಂದ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ(26), ಮಂಡ್ಯ ತಾಲೂಕಿನಿಂದ ಸಿ.ಅಶ್ವಥ್(25), ಮದ್ದೂರು ತಾಲೂಕಿನಿಂದ ಪಿ.ಸಂದರ್ಶ(34), ಶ್ರೀರಂಗಪಟ್ಟಣ ತಾಲೂಕಿನಿಂದ ಪಿ.ಎಸ್.ಚಂದ್ರಶೇಖರ್, ಕೆ.ಆರ್.ಪೇಟೆ ತಾಲೂಕಿನಿಂದ ಎಚ್.ಕೆ.ಅಶೋಕ,(21) ಹಾಗೂ ನಾಗಮಂಗಲ ತಾಲೂಕು ಕ್ಷೇತ್ರದಿಂದ ಎಚ್.ಎಸ್.ನರಸಿಂಹಯ್ಯ ಜಯಗಳಿಸಿದ್ದಾರೆ.
ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರಿ ಬ್ಯಾಂಕ್ ಹಾಗೂ ವ್ಯವಸಾಯೇತ್ತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಅಶೋಕ್(67), ಮಂಡ್ಯ ಉಪ ವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಸಿ.ಕಾಳೇಗೌಡ,(157), ಕೈಗಾರಿಕಾ ಸಹಕಾರ ಸಂಘಗಳು(ನೇಕಾರರ ಸಹಕಾರ ಸಂಘಗಳು ಸೇರಿದಂತೆ) ಕಾರ್ಮಿಕ ಸಹಕಾರ ಸಂಘಗಳು ಮತ್ತು ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಸಿ.ಜೋಗೀಗೌಡ(92) ಅವರು ಜಯಶಾಲಿಗಳಾಗಿದ್ದಾರೆ.







