ಜಮ್ಮು-ಕಾಶ್ಮೀರ: ಪಂಡಿತ್ ಸಮುದಾಯದ ಉದ್ಯೋಗಿಗಳಿಗೆ ತಾತ್ಕಾಲಿಕ ಶಿಬಿರ ಸ್ಥಾಪನೆಗೆ ನಿರ್ಧಾರ
ಜಮ್ಮು, ನ.5: ಪ್ರಧಾನಮಂತ್ರಿಗಳ ಅಭಿವೃದ್ಧಿ ಕಾರ್ಯಯೋಜನೆಯಡಿ ಕಾಶ್ಮೀರಿ ಪಂಡಿತ್ ಸಮುದಾಯದ ಉದ್ಯೋಗಿಗಳಿಗೆ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ 201.60 ಕೋಟಿ ರೂ. ಮೊತ್ತದ ಯೋಜನೆಗೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.
ಅನಂತ್‌ನಾಗ್ ಜಿಲ್ಲೆಯ ಮರ್ಹಮ-ಬಿಜ್‌ಬೆಹರ ನಗರ, ಗಂದೇರ್‌ಬಾಲ್ ಜಿಲ್ಲೆಯ ವಂಧಾಮ-ಲಾರ್ ಪ್ರದೇಶ, ಬಾರಾಮುಲ್ಲ ಜಿಲ್ಲೆಯ ಫತೇಪೊರ, ಶೋಫಿಯಾನ್ ಜಿಲ್ಲೆಯ ಅಲ್ಲೊಪೊರ-ಕೀಗಾಮ್, ಬಂಡಿಪೋರ ಜಿಲ್ಲೆಯ ಒಡಿನ-ಸುಂಬಲ್, ಕುಪ್ವಾರ ಜಿಲ್ಲೆಯ ಖುಲ್ಲಂಗಾಂವ್ ಬಾಗ್‌ನಲ್ಲಿ ತಾತ್ಕಾಲಿಕ ವಸತಿ ಶಿಬಿರ ನಿರ್ಮಿಸುವ ಯೋಜನೆಯಿದೆ.
ಇಲ್ಲಿ ವಲಸಿಗ ಉದ್ಯೋಗಿಗಳಿಗೆ ನೆಲೆ ಕಲ್ಪಿಸಲು ಒಟ್ಟು 1,680 ಮನೆಗಳನ್ನು ನಿರ್ಮಿಸಲಾಗುತ್ತದೆ. ಬಂಡಿಪೋರದಲ್ಲಿ 480, ಬಾರಮುಲ್ಲದಲ್ಲಿ 336, ಕುಪ್ವಾರದಲ್ಲಿ 288 ಹಾಗೂ ಉಳಿದ 3 ಜಿಲ್ಲೆಗಳಲ್ಲಿ ತಲಾ 192 ಮನೆ ನಿರ್ಮಿಸಲಾಗುವುದು. ಇದಕ್ಕೆ ಅಗತ್ಯವಿರುವ ಜಮೀನನ್ನು ಗುರುತಿಸಿ ಅದನ್ನು ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ವ್ಯಾಜ್ಯವನ್ನು ನಿವಾರಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ 4 ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ಜಮ್ಮು ಕಾಶ್ಮೀರದಲ್ಲಿ ನೆಲೆಸಲು ಬಯಸುವ ಕಾಶ್ಮೀರಿ ಪಂಡಿತ್ ಸಮುದಾಯದ ಜನರಿಗೆ ಸುಮಾರು 2000 ಹುದ್ದೆಗಳನ್ನು ಮರು ಹಂಚಿಕೆ ಮಾಡುವ ಪ್ರಸ್ತಾವನೆಗೆ ಜಮ್ಮು ಕಾಶ್ಮೀರ ಆಡಳಿತ ಸಮಿತಿ ಸೆಪ್ಟಂಬರ್ 24ರಂದು ಅನುಮೋದನೆ ನೀಡಿದೆ.







