ಟಿಆರ್‌ಪಿ ಹಗರಣ: ರೇಟಿಂಗ್ ಮಾರ್ಗಸೂಚಿ ಪರಿಷ್ಕರಣೆಗೆ ಸಮಿತಿ ರಚನೆ

ಹೊಸದಿಲ್ಲಿ, ನ.5: ಟಿವಿ ರೇಟಿಂಗ್ ಏಜೆನ್ಸಿಗಳ ಮಾರ್ಗಸೂಚಿ ಪರಿಷ್ಕರಣೆಯ ನಿಟ್ಟಿನಲ್ಲಿ ಮಾಹಿತಿ ಮತ್ತು ಪ್ರಸಾರಖಾತೆ ಸಚಿವಾಲಯ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ವರದಿ ತಿಳಿಸಿದೆ. ಕೆಲವು ಸುದ್ಧಿ ವಾಹಿನಿಗಳು ಹಣ ಕೊಟ್ಟು ಟಿಆರ್‌ಪಿಯನ್ನು ಅಧಿಕವಾಗಿ ಬಿಂಬಿಸುತ್ತಿರುವುದು ಮುಂಬೈ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಪ್ರಸಾರ ಭಾರತಿಯ ಸಿಇಒ ಶಶಿಶೇಖರ್ ವೆಂಪತಿ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಐಐಟಿ ಕಾನ್ಪುರದ ಪ್ರೊಫೆಸರ್ ಶಲಭ್, ಸಿ-ಡಾಟ್ ಕಾರ್ಯನಿರ್ವಾಹಕ ನಿರ್ದೇಶಕ ರಾಜ್‌ಕುಮಾರ್ ಉಪಾಧ್ಯಾಯ, ಡಿಸಿಷನ್ ಸೈಯನ್ಸಸ್ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿಯ ಪ್ರೊಫೆಸರ್ ಪುಲಕ್ ಘೋಷ್ ಸಮಿತಿಯ ಸದಸ್ಯರಾಗಿದ್ದಾರೆ.
ಸಂಸತ್ತಿನ ಸ್ಥಾಯಿ ಸಮಿತಿ ಮತ್ತು ಭಾರತದ ಟೆಲಿಕಾಂ ನಿಯಂತ್ರಕ ಪ್ರಾಧಿಕಾರ (ಟ್ರಾಯ್) ರೂಪಿಸಿದ್ದ ಮಾರ್ಗಸೂಚಿ ಈಗ ಬಳಕೆಯಲ್ಲಿದ್ದು ಇದಕ್ಕೆ ಹೊಸ ರೂಪ ನೀಡುವ ಅಗತ್ಯವಿದೆ. ಟ್ರಾಯ್ ಸಹಿತ ಹಲವು ಟೆಕ್ನಾಲಜಿ ಸಂಸ್ಥೆಗಳ ಸಲಹೆ, ಶಿಫಾರಸನ್ನು ಗಮನದಲ್ಲಿರಿಸಿಕೊಂಡು ನೂತನ ಮಾರ್ಗಸೂಚಿ ರಚಿಸಲಾಗುತ್ತದೆ. ಈ ಮೂಲಕ ಈಗಿರುವ ವ್ಯವಸ್ಥೆಯನ್ನು ಸಶಕ್ತ ಮತ್ತು ವಿಶ್ವಾಸಾರ್ಹಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಕೆಲವು ವೃತ್ತಿಪರ ಪತ್ರಕರ್ತರ ದುರ್ನಡತೆಯ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಸ್ವತಂತ್ರ ಸಂಸ್ಥೆಯೊಂದನ್ನು ರಚಿಸುವಂತೆ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಫೆಡರೇಷನ್ ಪ್ರಧಾನಿಗೆ ಪತ್ರ ಬರೆದಿತ್ತು. ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಫೆಡರೇಷನ್‌ನ ಅಧ್ಯಕ್ಷರಾಗಿದ್ದಾರೆ.







