ಬುದ್ದಿ ಉಪಯೋಗಿಸದ ಪೊಲೀಸರು: ಖಾಲಿದ್ ಸೈಫಿಗೆ ಜಾಮೀನು ನೀಡಿ ನ್ಯಾಯಾಲಯ

Photo: Twitter
ಹೊಸದಿಲ್ಲಿ, ನ. 5: ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ದಂಗೆಗೆ ಸಂಬಂಧಿಸಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ 'ಯುನೈಟೆಡ್ ಎಗೈನ್ಸ್ಟ್ ಹೇಟ್'ನ ಸದಸ್ಯರಾಗಿರುವ ಖಾಲಿದ್ ಸೈಫಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಜಾಮೀನು ಮಂಜೂರು ಮಾಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಕುಮಾರ್, ದುರ್ಬಲ ಸಾಕ್ಷ್ಯಾಧಾರಗಳ ಮೂಲಕ ಸೈಫಿ ವಿರುದ್ಧ ಆರೋಪ ಪಟ್ಟಿ ದಾಖಲಿಸಿದ ವಿಧಾನ ಪೊಲೀಸರು ಬುದ್ದಿಯನ್ನು ಉಪಯೋಗಿಸದೇ ಇರುವುದು ಹಾಗೂ ಪ್ರತೀಕಾರದ ಮಟ್ಟಕ್ಕೆ ಹೋಗಿರುವುದನ್ನು ತೋರಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಈಶಾನ್ಯ ದಿಲ್ಲಿಯ ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದ ನಿರ್ದಿಷ್ಟ ಪ್ರಕರಣದಲ್ಲಿ ಸೈಫಿ ವಿರುದ್ಧ ಪೊಲೀಸರು ಪೂರಕ ಆರೋಪ ಪಟ್ಟಿ ಸಲ್ಲಿಸಿದ್ದರು. ಯುನೈಟೆಡ್ ಎಗೈನ್ಸ್ಟ್ ಹೇಟ್ನ ಸದಸ್ಯರಾಗಿರುವ ಸೈಫಿ ಸಹ ಆರೋಪಿಗಳಾದ ತಾಹಿರ್ ಹುಸೈನ್ ಹಾಗೂ ಉಮರ್ ಖಾಲಿದ್ ಅವರನ್ನು ಜನವರಿ 8ರಂದು ಶಾಹೀನ್ಬಾಗ್ನಲ್ಲಿ ಭೇಟಿಯಾಗಿದ್ದಾರೆ ಎಂದು ಸಾಕ್ಷಿಗಳು ಹೇಳಿದ್ದಾರೆ. ಆದರೆ, ಅವರು ಭೇಟಿಯಾದ ಉದ್ದೇಶ ಏನು ಎಂಬುದನ್ನು ತಿಳಿಸಿಲ್ಲ. ಈ ಸಾಕ್ಷಿಯ ಹೇಳಿಕೆಯನ್ನು ಇಟ್ಟುಕೊಂಡು ಅಷ್ಟು ದೊಡ್ಡ ಪಿತೂರಿ ಮಾಡಿದರು ಎಂದು ಹೇಳುತ್ತಿರುವುದು ಹೇಗೆ ಎಂದು ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. 20 ಸಾವಿರ ರೂಪಾಯಿಯ ಜಾಮೀನು ಬಾಂಡ್ ಹಾಗೂ ಅದೇ ಮೊತ್ತದ ಶ್ಯೂರಿಟಿ ಮೇಲೆ ನ್ಯಾಯಾಲಯ ಖಾಲಿದ್ ಸೈಫಿಗೆ ಜಾಮೀನು ಮಂಜೂರು ಮಾಡಿತು.







