ಬಿಜೆಪಿಯ ‘ವೇಲ್ ಯಾತ್ರೆ’ಗೆ ಅನುಮತಿ ನೀಡಿಲ್ಲ: ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ ತ.ನಾ. ಸರಕಾರ

ಚೆನ್ನೈ, ನ.5: ರಾಜ್ಯಾದ್ಯಂತ ತಿಂಗಳ ಕಾಲ ‘ವೇಲ್ ಯಾತ್ರೆ’ ನಡೆಸಲು ಕೋರಿ ಬಿಜೆಪಿಯ ರಾಜ್ಯ ಘಟಕ ಸಲ್ಲಿಸಿದ ಅರ್ಜಿ ತಿರಸ್ಕರಿಸಲಾಗಿದೆ ಎಂದು ತಮಿಳುನಾಡು ಸರಕಾರ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದೆ.
ಕೋವಿಡ್-19ರ ಹಿನ್ನೆಲೆಯಲ್ಲಿ ಅಕ್ಟೋಬರ್ 31ರ ವರೆಗೆ ಸರಕಾರ ನೀಡಿದ ಮಾರ್ಗಸೂಚಿ ಕಾರಣಕ್ಕೆ ಹಾಗೂ ಯಾತ್ರೆ ಸಂದರ್ಭ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇರುವುದರಿಂದ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ರಾಜ್ಯ ಸರಕಾರದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣನ್ ನ್ಯಾಯಾಲಯಕ್ಕೆ ತಿಳಿಸಿದರು.
ಈ ಬಗ್ಗೆ ಬಿಜೆಪಿಯ ರಾಜ್ಯ ಘಟಕದ ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅವರು ಪ್ರತಿಪಾದಿಸಿದರು. ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾಹಿ ಹಾಗೂ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರನ್ನೊಳಗೊಂಡ ಪ್ರಥಮ ಪೀಠದ ಮುಂದೆ ಅಡ್ವೊಕೇಟ್ ಜನರಲ್ ಮನವಿಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು. ಬಿಜೆಪಿ ರಾಜ್ಯ ಘಟಕ ಯೋಜಿಸಿದ ಪ್ರಸ್ತಾಪಿತ ‘ವೇಲ್ ಯಾತ್ರೆ’ಯನ್ನು ತಡೆಯುವಂತೆ ಕೋರಿ ಚೆನ್ನೈಯ ಪಿ. ಸೆಂಥಿಲ್ ಕುಮಾರ್ ಹಾಗೂ ಬಾಲಮುರುಗನ್ ಈ ಮನವಿ ಸಲ್ಲಿಸಿದ್ದರು. ‘ವೇಲ್ ಯಾತ್ರೆ’ ಬಾಬರಿ ಮಸೀದಿ ಧ್ವಂಸಗೊಂಡ ದಿನವಾದ ಡಿಸೆಂಬರ್ 6ರಂದು ತ್ರಿಚೇಂದುರ್‌ನಲ್ಲಿ ಕೊನೆಗೊಳ್ಳಲಿರುವುದರಿಂದ ರಾಜ್ಯದಲ್ಲಿ ಕೋಮು ಹಿಂಸಾಚಾರ ಸಂಭವಿಸುವ ಸಾಧ್ಯತೆ ಇದೆ ಎಂದು ಎಂದು ದೂರುದಾರರು ವಾದಿಸಿದರು.







