ಸೋಲೊಪ್ಪಿಕೊಳ್ಳದೆ ಸಂಘರ್ಷದ ಹಾದಿ ತುಳಿಯಲು ಟ್ರಂಪ್ ಸಜ್ಜು ?
ಜನಾದೇಶ ಧಿಕ್ಕರಿಸಿ ಚುನಾಯಿತರು ಟ್ರಂಪ್ ಗೆ ಮತ ಚಲಾಯಿಸುವ ಸಾಧ್ಯತೆ !

ವಾಷಿಂಗ್ಟನ್: ಅಮೆರಿಕಾದ ಮತದಾನದ ಫಲಿತಾಂಶ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧವಾಗಿದ್ದಲ್ಲಿ ರಿಪಬ್ಲಿಕನ್ ಪಕ್ಷದವರು ಫಲಿತಾಂಶವನ್ನೇ ತಿರಸ್ಕರಿಸಬಹುದು ಎಂದು ಟ್ರಂಪ್ ಅವರ ಸಮೀಪವರ್ತಿಗಳಾದ ಇಬ್ಬರು ಸೆನೆಟ್ ಸದಸ್ಯರು ಹೇಳಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್ ಅವರ ಆಧಾರರಹಿತ ಆರೋಪಗಳಿಂದ ಕೆಲ ರಿಪಬ್ಲಿಕನ್ ಸದಸ್ಯರು ದೂರ ಸರಿದು ನಿಂತಿರುವ ಹೊರತಾಗಿಯೂ ಸೆನೆಟರುಗಳಾದ ಲಿಂಡ್ಸೇ ಗ್ರಹಾಂ ಮತ್ತು ಟೆಡ್ ಕ್ರುಝ್ ಅವರು ಅತ್ಯುತ್ಸಾಹದಿಂದ ಟ್ರಂಪ್ ಅವರನ್ನು ಬೆಂಬಲಿಸಿ ಟಿವಿ ವಾಹಿನಿ ಫಾಕ್ಸ್ ನ್ಯೂಸ್‍ನಲ್ಲಿ ಕಾಣಿಸಿಕೊಂಡು ಹೇಳಿಕೆ ನೀಡಿದ್ದಾರೆ.
"ಅಧ್ಯಕ್ಷರು ಸಿಟ್ಟುಗೊಂಡಿದ್ದಾರೆ ಹಾಗೂ ನಾನೂ ಸಿಟ್ಟುಗೊಂಡಿದ್ದೇನೆ ಮತ್ತು ಮತದಾರರು ಕೂಡ ಸಿಟ್ಟಾಗಬೇಕು ಎಂದು ನಾನು ನಿಮಗೆ ಹೇಳುತ್ತಿದ್ದೇನೆ,'' ಎದು ಕ್ರೂಝ್ ಅವರು ಫಾಕ್ಸ್ ಟಿವಿ ನಿರೂಪಕ ಸೀನ್ ಹನ್ನಿಟಿ ಅವರಿಗೆ ಹೇಳಿದ್ದಾರೆ. ಸೀನ್ ಅವರ 'ಈವ್ನಿಂಗ್ ಶೋ' ಟ್ರಂಪ್ ಅವರ ಅಚ್ಚುಮೆಚ್ಚಿನ ಶೋ ಆಗಿದೆ.
ಪೆನ್ನಿಸಿಲ್ವೇನಿಯಾ ಶಾಸಕಾಂಗವು ಫಲಿತಾಂಶಗಳನ್ನು ಮಾನ್ಯ ಮಾಡಲು ನಿರಾಕರಿಸಿ ರಾಜ್ಯದ ಮತಗಳನ್ನು ಟ್ರಂಪ್ ಅವರಿಗೆ ನೀಡುವುದೇ ಎಂದು ನಿರೂಪಕ ಕೇಳಿದಾಗ ಗ್ರಹಾಂ ಉತ್ತರಿಸಿ, ಎಲ್ಲಾ ಸಾದ್ಯತೆಗಳನ್ನು ನಾವು ಪರಿಶೀಲಿಸಬೇಕಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
"ಎಲ್ಲವೂ ಎಲ್ಲರ ಮುಂದಿರಬೇಕು ಎಂದು ನನಗನಿಸುತ್ತದೆ. ಫಿಲಡೆಲ್ಫಿಯಾ ಚುನಾವಣೆಗಳು ಹಾವಿನಂತೆ ವಕ್ರವಾಗಿದೆ. ಅವರೇಕೆ ಜನರನ್ನು ದೂರವಿಡುತ್ತಿದ್ದಾರೆ? ಅವರೇನು ಮಾಡುತ್ತಿದ್ದಾರೆಂದು ಜನರು ನೋಡುವುದು ಅವರಿಗೆ ಬೇಕಿಲ್ಲ,'' ಎಂದು ತಮ್ಮ ಆರೋಪಕ್ಕೆ ಯಾವುದೇ ಆಧಾರವೊದಗಿಸದೆ ಗ್ರಹಾಂ ಹೇಳಿದರು.







