ಸಿದ್ದರಾಮಯ್ಯರನ್ನು ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್‍ನಲ್ಲಿಯೇ ಹುನ್ನಾರ: ಲಕ್ಷ್ಮಣ ಸವದಿ

ಬೆಳಗಾವಿ, ನ.6: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರನ್ನು ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್‍ನಲ್ಲಿಯೇ ಹುನ್ನಾರ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಶುಕ್ರವಾರ ಸಿದ್ದರಾಮಯ್ಯ ‘ಶೀಘ್ರವೇ ಮುಖ್ಯಮಂತ್ರಿ ಬದಲಾಗಲಿದ್ದಾರೆ’ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಉಪಚುನಾವಣೆಯಲ್ಲಿ ಜನರಿಗೆ ಗೊಂದಲವನ್ನುಂಟು ಮಾಡುವ ಸಲುವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅವರದ್ದು ಕೇವಲ ರಾಜಕೀಯ ಹೇಳಿಕೆಯಾಗಿದೆ. ಅವರನ್ನು ವಿರೋಧ ಪಕ್ಷದ ನಾಯಕರ ಸ್ಥಾನದಿಂದ ತೆಗೆಯುತ್ತಾರೆ ಎಂಬ ಖಚಿತ ಮಾಹಿತಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಿಕ್ಕಿದೆ ಎಂದು ತಿಳಿಸಿದರು.
ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಅವರೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದ ಅವರು, ಉಪ ಚುನಾವಣೆ ಮತ್ತು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸಂಪುಟ ವಿಸ್ತರಣೆ ಆಗಲಿದೆ. ದಿಲ್ಲಿಗೆ ತೆರಳಿ ವರಿಷ್ಠರ ಗಮನಕ್ಕೆ ತಂದು ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜಯೇಂದ್ರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧಿಸುವ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಅರವಿಂದ ಪಾಟೀಲ ಸೇರ್ಪಡೆಗೆ ಮುಖ್ಯಮಂತ್ರಿ ಸಹಮತ: ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ ಕೆಲವೇ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಾರೆ. ಈ ವಿಷಯವಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧಿಸಿರುವುದರಿಂದ, ನಾವು ಸಿಬಿಐ ದುರ್ಬಳಕೆ ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್‍ನವರು ಆರೋಪಿಸುತ್ತಿರುವುದರಲ್ಲಿ ಅರ್ಥವಿಲ್ಲ. ನಿಷ್ಪಕ್ಷವಾಗಿ ತನಿಖೆ ನಡೆಸಿ, ಯೋಗೀಶಗೌಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಆ ಸಂಸ್ಥೆ ಕ್ರಮ ಕೈಗೊಂಡಿದೆ. ಮನಬಂದಂತೆ ದೂರುವುದು ಸರಿಯಲ್ಲ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‍ನವರು ನಿಸ್ಸೀಮರು. ಸುಳ್ಳು ಹೇಳುವುದಕ್ಕೆ ಪ್ರಶಸ್ತಿ ನೀಡುವುದಿದ್ದರೆ ಕಾಂಗ್ರೆಸ್ ನಾಯಕರಿಗೆ ಕೊಡಬೇಕು ಎಂದು ಪ್ರತಿಕ್ರಿಯಿಸಿದರು.







