ಅನುಮತಿಯಿಲ್ಲದೆ ‘ವೇಲ್‌ಯಾತ್ರೆ’ಗೆ ಮುಂದಾದ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಬಂಧನ

ಚೆನ್ನೈ, ನ.6: ಬಿಜೆಪಿಯು ರಾಜ್ಯಾದ್ಯಂತ ನಡೆಸಲು ನಿರ್ಧರಿಸಿರುವ ವೇಲ್ ಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರೂ, ಪಕ್ಷದ ಸುಮಾರು 100 ಕಾರ್ಯಕರ್ತರೊಂದಿಗೆ ಯಾತ್ರೆಗೆ ಚಾಲನೆ ನೀಡಲು ಮುಂದಾದ ಬಿಜೆಪಿ ತಮಿಳುನಾಡು ಘಟಕಾಧ್ಯಕ್ಷ ಎಲ್. ಮುರುಗನ್‌ರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ರಾಜ್ಯದಲ್ಲಿ ಕೊರೋನ ಸೋಂಕಿನ ಸ್ಥಿತಿಯ ಹಿನ್ನೆಲೆಯಲ್ಲಿ, ಬಿಜೆಪಿ ನವೆಂಬರ್ 6ರಿಂದ ಡಿಸೆಂಬರ್ 6ರವರೆಗೆ ನಡೆಸಲು ಉದ್ದೇಶಿಸಿರುವ ವೇಲ್‌ಯಾತ್ರೆಗೆ ಅನುಮತಿ ನೀಡುವುದಿಲ್ಲ ಎಂದು ರಾಜ್ಯ ಸರಕಾರ ಗುರುವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿತ್ತು.
ಆದರೆ ಕಾರ್ಯಕ್ರಮ ನಡೆಸಿಯೇ ಸಿದ್ಧ ಎಂದು ಬಿಜೆಪಿ ಹೇಳಿತ್ತು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ತನಗಿದೆ. ಇದು ಸಂವಿಧಾನ ದತ್ತ ಹಕ್ಕು ಎಂದು ಹೇಳಿದ್ದ ಎಲ್. ಮುರುಗನ್, ತಿರುವಲ್ಲೂರು ಜಿಲ್ಲೆಯ ತಿರುತ್ತನಿ ಮುರುಗನ್ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ವೇಲ್‌ಯಾತ್ರೆಗೆ ಚಾಲನೆ ನೀಡಲಾಗುವುದು ಎಂದಿದ್ದರು. ಶುಕ್ರವಾರ ತಿರುವಲ್ಲೂರು ಗಡಿಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ವಾಹನಗಳನ್ನು ತಡೆದ ಪೊಲೀಸರು, ಮುರುಗನ್ ಹಾಗೂ ಅವರೊಂದಿಗೆ ಕೆಲವು ಕಾರ್ಯಕರ್ತರನ್ನು ಮಾತ್ರ ಮುಂದೆ ಸಾಗಲು ಅವಕಾಶ ನೀಡಿದರು. ತಿರುವಲ್ಲೂರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಆದರೆ ವೇಲ್‌ಯಾತ್ರೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಿದರೆ ಬಂಧಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದರು.
ರಾಜ್ಯಸರಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಹಿಂದು ವಿರೋಧಿ ನಿಲುವನ್ನು ಬಹಿರಂಗಗೊಳಿಸಲು ವೇಲ್ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.







