ಅರ್ನಬ್‌ಗೆ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿ ಎಚ್ಚರಿಕೆ ಪತ್ರಕ್ಕೆ ಸುಪ್ರೀಂಕೋರ್ಟ್ ಗರಂ; ಶೋಕಾಸ್ ನೋಟಿಸ್
ರಿಪಬ್ಲಿಕ್ ಟಿವಿ ಸಂಪಾದಕನ ಬಂಧಿಸದಂತೆ ಸೂಚನೆ

ಹೊಸದಿಲ್ಲಿ, ನ.6: ಸದನವು ತನಗೆ ನೀಡಿದ್ದ ನೋಟಿಸ್‌ನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ತೋರಿಸಿದ್ದಕ್ಕಾಗಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಎಚ್ಚರಿಕೆ ನೀಡಿ ಪತ್ರ ಬರೆದಿರುವ ಆರೋಪಕ್ಕೆ ಸಂಬಂಧಿಸಿ ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ಶುಕ್ರವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಹಾಗೂ ಈ ಬಗ್ಗೆ ಎರಡು ವಾರಗಳೊಳಗೆ ಉತ್ತರಿಸುವಂತೆ ತಿಳಿಸಿದೆ.
ಮಹಾರಾಷ್ಟ್ರ ವಿಧಾನಸಭೆಯ ಹಕ್ಕುಚ್ಯುತಿ ನಿರ್ಣಯ ಉಲ್ಲಂಘನೆಯ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸದಂತೆಯೂ ಸುಪ್ರೀಂಕೋರ್ಟ್ ಆದೇಶಿಸಿದೆ. ಆಕ್ಟೋಬರ್ 13ರಂದು ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಯವರು ಬರೆದ ಪತ್ರವನ್ನು ತಾನು ಗಂಭೀರವಾಗಿ ಪರಿಗಣಿಸಿರುವುದಾಗಿಯೂ ನ್ಯಾಯಾಲಯ ತಿಳಿಸಿದೆ. ಆರ್ನಬ್ ಗೋಸ್ವಾಮಿ ಅವರಿಗೆ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿ ಬರೆದಿದ್ದ ಪತ್ರದ ಅಂಶಗಳನ್ನು ಅವರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಪ್ರಸ್ತಾವಿಸಿದಾಗ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ವಿಧಾನಸಭಾ ಕಲಾಪಗಳು ಅತ್ಯಂತ ಗೌಪ್ಯವಾಗಿದ್ದು, ಅವುಗಳ ವಿವರಗಳನ್ನು ಬಹಿರಂಗಪಡಿಸುವಂತಿಲ್ಲವೆಂದು ಹೇಳುವ ಪತ್ರವನ್ನು ‘ಪ್ರಶ್ನಾರ್ಹ’ ಅಧಿಕಾರಿಯು ಬರೆದಿರುವುದು ತನಗೆ ಅಚ್ಚರಿ ತಂದಿದೆ ಎಂದು ನ್ಯಾಯಪೀಠ ತಿಳಿಸಿದೆ.
‘‘ಇದೊಂದು ಗಂಭೀರವಾದ ವಿಷಯ ಮತ್ತು ನ್ಯಾಯಾಂಗ ನಿಂದನೆಯಾಗಿದೆ. ಮೇಲಿನ ಹೇಳಿಕೆಗಳು ನ್ಯಾಯಾಂಗ ಆಡಳಿತವನ್ನು ಅಗೌರವಿಸುವ ಪ್ರವೃತ್ತಿಯನ್ನು ಹೊಂದಿವೆ ಹಾಗೂ ನ್ಯಾಯಾಂಗದ ಆಡಳಿತದಲ್ಲಿ ನೇರವಾದ ಹಸ್ತಕ್ಷೇಪವಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
‘‘ಪತ್ರವನ್ನು ಬರೆದಿರುವ ವ್ಯಕ್ತಿಯ ಉದ್ದೇಶವು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿರುವ ಅರ್ಜಿದಾರನಿಗೆ ದಂಡವಿಧಿಸುವ ಜೊತೆಗೆ ಬೆದರಿಕೆಯೊಡ್ಡಿರುವಂತೆ ಕಾಣಿಸುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ 129ನೇ ವಿಧಿಯಡಿ ಅಧಿಕಾರದ ಬಳಕೆಯಲ್ಲಿ ನ್ಯಾಯಾಂಗ ನಿಂದನೆಯ ಆರೋಪದಲ್ಲಿ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದೆಂದು ಪ್ರಶ್ನಿಸಿ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಯವರಿಗೆ ನೋಟಿಸ್ ಜಾರಿಗೊಳಿಸುವುದಾಗಿ ಸುಪ್ರೀಂಕೋರ್ಟ್ ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.
ಸುಶಾಂತ್ ಸಿಂಗ್ ರಾಜ್‌ಪುತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವರದಿಗಾರಿಕೆಗಾಗಿ ತನ್ನ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿದ್ದರ ವಿರುದ್ಧ ಅರ್ನಬ್ ಗೋಸ್ವಾಮಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು.
ಸುಶಾಂತ್‌ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ವಾಹಿನಿಯು ತನ್ನ ಚರ್ಚಾಕಾರ್ಯಕ್ರಮಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕೆಲವು ನಿರ್ದಿಷ್ಟ ಟೀಕೆಗಳನ್ನು ಮಾಡಿದ್ದಕ್ಕಾಗಿ ಗೋಸ್ವಾಮಿಗೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು.







