ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿಯಿಂದ ಯೋಜನೆ
ಉಡುಪಿ, ನ. 6: ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ವ್ಯವಹರಿಸುತ್ತಿರುವ ಕ್ಷೌರಿಕ ವೃತ್ತಿನಿರತ 60 ವರ್ಷದ ಮೇಲ್ಪಟ್ಟ ಸದಸ್ಯರಿಗೆ ಸತತ ಮೂರು ವರ್ಷದಿಂದ ಸಹಕಾರಿ ಲಾಭಾಂಶದಲ್ಲಿ 45 ಜನರಿಗೆ ಒಟ್ಟು 3 ಲಕ್ಷ ರೂ. ಹಿರಿಯ ನಾಗರಿಕರ ವೇತನ ವಿತರಿಸಲಾಗಿದೆ ಎಂದು ಸವಿತಾ ಸಹಕಾರಿಯ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತಾ ಸಮಾಜದ ಬಡ ಹೆಣ್ಣು ಮಕ್ಕಳ ಮದುವೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ, ಸವಿತಾ ಆರೋಗ್ಯ ಶ್ರೀಯೋಜನೆಯಡಿ ಸವಿತಾ ಸೆಲೂನ್ ಸಾಮಾಗ್ರಿ ಮಳಿಗೆಯಲ್ಲಿ ಕನಿಷ್ಟ 12,000ರೂ. ವ್ಯವಹರಿಸುವ ಕ್ಷೌರಿಕ ವೃತ್ತಿನಿರತ ಸದಸ್ಯರಿಗೆ ಸಹಕಾರಿ ಲಾಭಾಂಶದಲ್ಲಿ 5,000 ರೂ. ನಿಂದ 25,000 ರೂ.ವರೆಗೆ ಸಹಾಯಧನ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ಕೋವಿಡ್ ಲಾಕ್‌ಡೌನ್ ತೆರವಿನ ಬಳಿಕ ಆರ್ಥಿಕತೆಯನ್ನು ಪುನಃಶ್ಚೇತನ ಗೊಳಿಸಲು ಸದಸ್ಯರಿಗೆ 10,000 ರೂ. ಬಡ್ಡಿ ರಹಿತ ಸಾಲ ಸೌಲಭ್ಯ ವನ್ನು ನೀಡಲಾಗಿದೆ. ಸಹಕಾರಿ ಸೆಲೂನ್ ಸಾಮಗ್ರಿ ಮಳಿಗೆಯಲ್ಲಿ ವ್ಯವಹರಿಸುತ್ತಿರು ವವರಿಗೆ ಈ ಸಾಲ ಜಾಮೀನು ರಹಿತವಾಗಿದೆ. ಆರ್ಥಿಕ ಪುನಃಶ್ಚೇತನಕ್ಕೆ ನೀಡಲು ಸರಕಾರದ ಬಡ್ಡಿರಹಿತ ಸಾಲ ಪಡೆದುಕೊಂಡಿರುವ ಫಲಾನುಭವಿಗಳಿಗೆ ಸಹಕಾರಿಯಿಂದ ಶೇ.5 ಬಡ್ಡಿ ದರದಲ್ಲಿ 10,000 ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸಹಕಾರಿ ವತಿಯಿಂದ ಸದಸ್ಯರಿಗೆ ಮಣಿಪಾಲ ಆರೋಗ್ಯ ಕಾರ್ಡ್ ನೀಡಲು ಯೋಜನೆ ಹಾಕಿಕೊಂಡಿದ್ದು, ಈ ಯೋಜನೆಯಡಿ ಪ್ರತಿ ಕುಟುಂಬ ವಾರ್ಷಿಕವಾಗಿ 50,000ರೂ. ಮೊತ್ತದ ವೈದ್ಯಕೀಯ ಸೌಲಭ್ಯವನ್ನು ಮಣಿಪಾಲ ಸಮೂಹ ವ್ಯಾಪ್ತಿಗೆ ಬರುವ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಜಿಲ್ಲಾ ಸವಿತ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮುಲ್ಕಿ ಉಪಸ್ಥಿತರಿದ್ದರು.







