ಅಂಚೆ ಕಚೇರಿಗಳಲ್ಲೂ ಡಿಜಿಟಲ್ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ಅವಕಾಶ
ಉಡುಪಿ, ನ.6: ಅಂಚೆ ಇಲಾಖೆಯ ಒಡೆತನದಲ್ಲಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ), ಭಾರತದಲ್ಲಿ ಪಿಂಚಣಿದಾರರಿಗೆ ಜೀವನ್ ಪ್ರಮಾಣ್ / ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೆಪಿಪಿ) ಸಂಗ್ರಹ ಸೇವೆ ಗಳನ್ನು ಪ್ರಾರಂಭಿಸಿವೆ ಎಂದು ಉಡುಪಿ ಕ್ಷೇತ್ರೀಯ ಭವಿಷ್ಯ ನಿಧಿ ಕಾರ್ಯಾಲಯದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭವಿಷ್ಯ ನಿಧಿ ಕಚೇರಿಯಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿ ದಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಪ್ಪಿಸುವ ಸಲುವಾಗಿ ಕ್ಷೇತ್ರೀಯ ಭವಿಷ್ಯ ನಿಧಿ ಇಲಾಖೆ, ಅಂಚೆ ಕಚೇರಿಗಳಲ್ಲಿ ಸಹ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದ್ದಾರೆ.
ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ತಮ್ಮ ಹತ್ತಿರದ ಅಂಚೆ ಕಚೇರಿಗಳಿಗೆ ಭೇಟಿ ನೀಡಬಹುದು ಅಥವಾ ಪೋಸ್ಟ್ಮ್ಯಾನ್/ಡಾಕ್ ಸೇವಕರನ್ನು ತಮ್ಮ ಮನೆಗೆ ಕಳುಹಿಸುವಂತೆ ಅಂಚೆ ಕಚೇರಿಗೆ ವಿನಂತಿಸಿಕೊಳ್ಳ ಬಹುದು. ಈ ನಿಟ್ಟಿನಲ್ಲಿ ಅಗತ್ಯ ನೆರವು ಮತ್ತು ಸಹಾಯವನ್ನು ಅಂಚೆ ಕಚೇರಿ ಗಳು ನೀಡುತ್ತವೆ. ಈ ಸೌಲಭ್ಯಕ್ಕಾಗಿ ಅಂಚೆ ಕಚೇರಿಗಳು 70ರೂ. (ತೆರಿಗೆಗಳು ಸೇರಿ) ಶುಲ್ಕ ವಿಧಿಸುತ್ತವೆ. ಭಾರತದ ಪೋಸ್ಟ್ ಪಾವತಿ ಬ್ಯಾಂಕ್ ನೀಡುವ ಈ ಸೇವೆಗಾಗಿ ಶುಲ್ಕವನ್ನು ಪಿಂಚಣಿದಾರರು ಅಂಚೆ ಕಚೇರಿಗೆ ಭೇಟಿ ನೀಡುತ್ತಾ ರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೇ ಪಾವತಿಸಬೇಕಾಗುತ್ತದೆ. ಆದರೆ ಈ ಸೌಲಭ್ಯ ಐಚ್ಛಿಕವಾಗಿರುತ್ತದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಪ್ರಕಟಣೆ ತಿಳಿಸಿದೆ.







