ಕೋವಿಡ್ ಬಾಧಿತರಾದ ನೌಕರರು-ಕಾರ್ಮಿಕರಿಗೆ ಕ್ವಾರಂಟೈನ್ ರಜೆ ಮಂಜೂರು: ಸರಕಾರ ಆದೇಶ

ಬೆಂಗಳೂರು, ನ.6: ಹೈಕೋರ್ಟ್ ನಿರ್ದೇಶನದಂತೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಾಧಿತರಾದ ನೌಕರರು, ಕಾರ್ಮಿಕರಿಗೆ ಕ್ವಾರಂಟೈನ್ ರಜೆ ಮಂಜೂರು ಮಾಡುವ ಕುರಿತು ಸರಕಾರ ಆದೇಶ ನೀಡಿದೆ.
ಆದೇಶದನ್ವಯ ಕೊರೋನ ರೋಗದಿಂದ ಬಾಧಿತರಾದ ನೌಕರರು-ಕಾರ್ಮಿಕರು ಕ್ವಾರಂಟೈನ್‍ನಲ್ಲಿರುವ ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಬಾರದು. ಕೊರೋನ ರೋಗದಿಂದ ಬಾಧಿತರಾದ ನೌಕರರು, ಕಾರ್ಮಿಕರಿಗೆ ಅವರ ಹಕ್ಕಿನಲ್ಲಿರುವ ರಜೆಯನ್ನು ಉಪಯೋಗಿಕೊಳ್ಳಲು ಅನುವು ಮಾಡಿಕೊಡಬೇಕು.
ಇಎಸ್‍ಐ ವ್ಯಾಪ್ತಿಗೆ ಒಳಪಡದ ಕೊರೋನ ರೋಗದಿಂದ ಬಾಧಿತರಾದ ನೌಕರರು, ಕಾರ್ಮಿಕರಿಗೆ ಸ್ವ-ಇಚ್ಛೆಯಿಂದ ಕ್ವಾರಂಟೈನ್ ಅವಧಿಗೆ ಅವರ ಹಕ್ಕಿನಲ್ಲಿ ಲಭ್ಯವಿರುವ ರಜೆಯನ್ನ ಮಂಜೂರು ಮಾಡಬೇಕು. ಒಂದು ವೇಳೆ ಬಾಕಿ ರಜೆ ಇಲ್ಲದಿದ್ದರೆ ಇತರೆ ಕಾರ್ಮಿಕರ ರಜೆಯನ್ನ ವರ್ಗಾಯಿಸಿಕೊಂಡು ನಿಯಮಾನುಸಾರ ಅನುವು ಮಾಡಿಕೊಡಬೇಕು.
ಮಾಲಕರು ಸ್ವ-ಇಚ್ಛೆಯಿದ ರಜೆ ಮಂಜೂರು ಮಾಡಲು ಅವಕಾಶವಾಗದಿದ್ದಲ್ಲಿ, ಸಾಧ್ಯವಿಲ್ಲದಿದ್ದಲ್ಲಿ ಸದರಿ ಅವಧಿಗೆ ವಿಶೇಷ ರಜೆ ನೀಡುವ ಕುರಿತು ಮಾಲಕರು ಮತ್ತು ಕಾರ್ಮಿಕರು ಉಭಯ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.





