ದಲಿತ ಯುವತಿಯ ಮರ್ಯಾದೆ ಹತ್ಯೆ ಪ್ರಕರಣ: ಡಿವೈಎಸ್ಪಿ, ಸಿಪಿಐ ಅಮಾನತಿಗೆ ಒತ್ತಾಯಿಸಿ ಧರಣಿ

ಮಂಡ್ಯ, ನ.6: ಮಳವಳ್ಳಿ ತಾಲೂಕು ನಂಜೇಗೌಡನದೊಡ್ಡಿ ಗ್ರಾಮದ ದಲಿತ ಯುವತಿ ಮೇಘಶ್ರೀ ಮರ್ಯಾದೆ ಹತ್ಯೆ ಖಂಡಿಸಿ ಹಾಗೂ ಆರೋಪಿಗಳು ಮತ್ತು ಡಿವೈಎಸ್ಪಿ, ಸಿಪಿಐ ಅಮಾನತ್ತಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಸಂಘಟನೆ, ಜನವಾದಿ ಮಹಿಳಾ ಸಂಘಟನೆ, ಮಹಿಳಾ ಮುನ್ನಡೆ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರೈತಸಭಾಂಗಣದಿಂದ ಹೆದ್ದಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿದ ನೂರಾರು ಮಂದಿ ಪ್ರತಿಭಟನಾಕಾರರು ಎಸ್ಪಿ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಮರ್ಯಾದೆ ಹತ್ಯೆ ಮಾಡಿದವರ ಬಂಧಿಸಿ ಯುವತಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮೇಘಶ್ರೀಯನ್ನು ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಸವರ್ಣಿಯ ಸಮುದಾಯಕ್ಕೆ ಸೇರಿದ ಟಿ.ಕೆ.ಸ್ವಾಮಿ 2014-15ರಲ್ಲಿ ಬೆಂಗಳೂರಿನಲ್ಲಿ ಮದುವೆಯಾಗಿದ್ದು, ಜಾತಿ ಕಾರಣಕ್ಕೆ ಸ್ವಾಮಿ ಕುಟುಂಬದವರು ಕೊಂದು ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಇದಕ್ಕೆ ಪೂರಕವೆಂಬಂತೆ 2015ರಲ್ಲಿ ಪಾಂಡವಪುರ ತಾಲೂಕು ಚಿನಕುರಳಿ ಸಮೀಪ ಬ್ಯಾಟರಾಯನಪುರ ನಾಲೆಯಲ್ಲಿ ಸಿಕ್ಕಿದ ಅಪರಿಚಿತ ಶವ ಕೊಲೆಯಾಗಿದೆ ಎಂದು ಪೊಲೀಸರು ಕಡತದಲ್ಲಿದೆ. ಈ ಹುಡುಗಿ ತಮ್ಮ ಮಗಳೆಂದು ಮೇಘಶ್ರೀ ತಾಯಿ ಮಹಾದೇವಮ್ಮ, ತಂದೆ ಮಹಾದೇವಯ್ಯ ಪಾಂಡವಪುರ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಡಿವೈಎಸ್ಪಿ ಅರುಣ್‍ನಾಗೇಗೌಡ, ಸಿಪಿಐ ಪ್ರಭಾಕರ್ ದೂರನ್ನು ಕಾಲಕಸದಂತೆ ಕಾಣುತ್ತಿದ್ದಾರೆ ಎಂದು ಅವರು ಅವರು ದೂರಿದರು.
ಕೊಲೆಯಾಗಿರುವ ಅಪರಿಚಿತ ಯುವತಿಯ ಶವದ ಫೋಟೋ ತಮ್ಮ ಮಗಳದೆಂದು ತಂದೆತಾಯಿ ಗುರುತಿಸಿದ್ದಾರೆ. ಮೇಘಶ್ರೀ ಮರ್ಯಾದೆಗೇಡು ಹತ್ಯೆಯಾಗಿರುವುದಕ್ಕೆ ದಟ್ಟ ಸಾಕ್ಷಿಗಳಾಗಿರುವಾಗ ಡಿವೈಎಸ್ಪಿ ಅರುಣ್‍ನಾಗೇಗೌಡ ಆರೋಪಿಗಳನ್ನು ಬಂಧಿಸದೆ ಇರುವುದು ಸಂಶಯಕ್ಕೆ ಎಡೆಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಸ್ಪಿ ಅರುಣ್‍ನಾಗೇಗೌಡ, ಸಿಪಿಐ ಪ್ರಭಾಕರ್ ಅವರನ್ನು ಅಮಾನತ್ತುಪಡಿಸಿ ಸಮರ್ಥ ಪೊಲೀಸ್ ಅಧಿಕಾರಿ ನೇಮಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳ ಬಂಧಿಸಬೇಕು. ಮೇಘಶ್ರೀ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರೊ.ಹುಲ್ಕೆರೆ ಮಹಾದೇವ, ದಸಂಸ ಒಕ್ಕೂಟದ ಗುರುಪ್ರಸಾದ್ ಕೆರಗೋಡು, ಕೆಂಪಯ್ಯ ಸಾಗ್ಯ, ಎಸ್.ಎಂ.ಕೃಷ್ಣ, ದೇವರಾಜ ಜಕ್ಕನಹಳ್ಳಿ, ಹುರಗಲವಾಡಿ ರಾಮಯ್ಯ, ಆರ್.ಕೃಷ್ಣ, ಎಸ್.ಕುಮಾರ್, ಕುಬೇರಪ್ಪ, ತೂಬಿನಕೆರೆ ಪ್ರಸನ್ನ, ರಮಾನಂದ ತರೀಕೆರೆ, ಮಹಿಳಾ ಮುನ್ನಡೆಯ ಪೂರ್ಣಿಮಾ, ಜನವಾದಿ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಜಿಲ್ಲಾಧ್ಯಕ್ಷೆ ಶೋಭಾ, ಸುಶೀಲ, ಮಂಜುಳ, ಜನಶಕ್ತಿ ಸಂಘಟನೆಯ ಎಂ.ಸಿದ್ದರಾಜು, ನಾಗೇಶ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







