ರಹಸ್ಯವಾಗಿ ಪೆರೋಲ್‌ನಲ್ಲಿ ಹೊರ ಬಂದಿದ್ದ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ, ಡೇರಾ ಮುಖ್ಯಸ್ಥ ಗುರ್ಮೀತ್

ಚಂಡಿಗಢ: ಡೇರಾ ಸಚ್ಚಾ ಸೌದಾದ ವಿವಾದಿತ ಮುಖ್ಯಸ್ಥ ಗುರ್ಮೀತ್ ಸಿಂಗ್‌ಗೆ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರ್ಯಾಣದ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರ ರಹಸ್ಯವಾಗಿ ಅಕ್ಟೋಬರ್ 24 ರಂದು ಒಂದು ದಿನದ ಪೆರೋಲ್ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಡೇರಾ ಮುಖ್ಯಸ್ಥ ಪ್ರಸ್ತುತ ರೋಹ್ಟಕ್‌ನ ಜೈಲಿನಲ್ಲಿದ್ದಾನೆ. ಅನಾರೋಗ್ಯದಿಂದ ಗುರುಗ್ರಾಮದ ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯನ್ನು ಭೇಟಿಯಾಗಲು ಗುರ್ಮೀತ್‌ಗೆ ಪರೋಲ್ ನೀಡಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.
ಡೇರ ಮುಖ್ಯಸ್ಥನನ್ನು ಸುನಾರಿಯಾ ಜೈಲಿನಿಂದ ಗುರುಗ್ರಾಮದ ಆಸ್ಪತ್ರಗೆ ಭಾರೀ ಭದ್ರತೆಯಲ್ಲಿ ಅಕ್ಟೋಬರ್ 24 ರಂದು ಕರೆದೊಯ್ಯಲಾಗಿದ್ದು, ಆತ ಸಂಜೆ ತನಕ ತಾಯಿಯೊಂದಿಗೆ ಇರಲು ಅವಕಾಶ ನೀಡಲಾಗಿತ್ತು.
ಈ ಕುರಿತು ಕೇವಲ ಸಿಎಂ ಹಾಗೂ ಹರ್ಯಾಣ ಸರಕಾರದ ಕೆಲವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಬಿಜೆಪಿಯ ಉನ್ನತ ನಾಯಕರ ಸೂಚನೆ ಮೇರೆಗೆ ಇದನ್ನು ನಡೆಸಲಾಗಿತ್ತು. 80ರಿಂದ 100 ಯೋಧರಿಗೂ ಸಹ ಅವರು ಬೆಂಗಾವಲು ನೀಡುತ್ತಿದ್ದ ವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ ಎನ್ನಲಾಗಿದೆ.







