ಶಿವಮೊಗ್ಗ: ಕಸ್ತೂರಿ ರಂಗನ್ ವರದಿ, ಭೂ ಸುಧಾರಣಾ ಕಾಯ್ದೆ ವಿರೋಧಿಸಿ 'ರೈತ ಕಲ್ಯಾಣ ನಡಿಗೆ'ಗೆ ಚಾಲನೆ

ಶಿವಮೊಗ್ಗ, ನ.7: ಸಹಕಾರಿ ಧುರೀಣ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡರ ಸಂಚಾಲಕತ್ವದಲ್ಲಿ ಪಕ್ಷಾತೀತವಾಗಿ ಕಸ್ತೂರಿ ರಂಗನ್ ವರದಿ, ಅಕೇಶಿಯ ನೆಡುತೋಪು, ಭೂ ಸುಧಾರಣಾ ಕಾಯ್ದೆ ವಿರೋಧಿಸಿ 3 ದಿನಗಳ ಕಾಲ 42 ಕಿ.ಮೀ. ಪಾದಯಾತ್ರೆ 'ರೈತ ಕಲ್ಯಾಣ ನಡಿಗೆ'ಗೆ ಬಿದರಗೋಡಿನ ಶ್ರೀರಾಮಮಂದಿರದ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಗಿದೆ.
ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಮಧು ಬಂಗಾರಪ್ಪ ದೀಪ ಬೆಳಗಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ನೂರಾರು ವರ್ಷಗಳಿಂದ ಪಾರಂಪರಿಕವಾಗಿ ವಾಸಿಸುತ್ತಿರುವ ಹಳ್ಳಿಗಾಡಿನ ರೈತರು, ಕೃಷಿ ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಜನ ವಿರೋಧಿ ಕಸ್ತೂರಿ ರಂಗನ್ ವರದಿ ಕೈಬಿಡಲು ಒತ್ತಾಯಿಸಿ ಮತ್ತು ಸ್ವಾಭಾವಿಕ ಅರಣ್ಯ ನಾಶಗೊಳಿಸಿ ಪರಿಸರ ಅಸಮತೋಲನ ಸೃಷ್ಟಿಸಿರುವ ಅಕೇಶಿಯ ನೆಡುತೋಪು ವಿರೋಧಿಸಿ ಹಾಗೂ ಏಕಪಕ್ಷೀಯ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ಮೂಲಕ ಗೇಣಿದಾರ ರೈತರನ್ನು ಬೀದಿಪಾಲು ಮಾಡುವ ಭೂಸುಧಾರಣಾ ಕಾಯ್ದೆ ಖಂಡಿಸಿ ಸರಕಾರದ ಗಮನಸೆಳೆಯಲು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಪಕ್ಷಾತೀತವಾಗಿ 42 ಕಿ.ಮೀ.ಗಳ ಬೃಹತ್ ಪಾದಯಾತ್ರೆಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು.
ಬೇಳೂರು ಗೋಪಾಲಕೃಷ್ಣ ಮಾತನಾಡಿ, ರೈತಪರ ಹೋರಾಟ ಎಂದು ಬೂಟಾಟಿಕೆ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಕಾಳಜಿ ಇಲ್ಲ. ಈ ಕಸ್ತೂರಿ ರಂಗನ್ ವರದಿ ಮಲೆನಾಡ ರೈತರಿಗೆ ಮರಣ ಶಾಸನವಾಗಿದೆ. ಮಲೆನಾಡ ರೈತರ ಬದುಕನ್ನು ಸರ್ವನಾಶ ಮಾಡಲು ಹೊರಟಿರುವ ಈ ಸರಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಗನ ಲೂಟಿ ಹೆಚ್ಚಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಮಧು ಬಂಗಾರಪ್ಪ ಮಾನ ಮರ್ಯಾದೆ ಇದ್ದಿದ್ದೆ ಆದರೆ ಕಸ್ತೂರಿ ರಂಗನ್ ವರದಿಯನ್ನು ಬಿಜೆಪಿ ಸರಕಾರ ತಿರಸ್ಕರಿಸಬೇಕು ಎಂದರು.
ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರು ಮಲೆನಾಡಿನ ರೈತರಿಗೆ ಶಕ್ತಿ ನೀಡಿ ಶಕ್ತಿ ತುಂಬಿದವರು. ಕಸ್ತೂರಿ ರಂಗನ್ ವರದಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಪ್ರತಿಯೊಬ್ಬರು ಪಕ್ಷಾತೀತವಾಗಿ ಹೋರಾಡಬೇಕಾಗಿದೆ. ಮಲೆನಾಡನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪಾದಯಾತ್ರೆಯ ರೂವಾರಿ ಹಿರಿಯ ಸಹಕಾರಿ ಡಾ.ಮಂಜುನಾಥ ಗೌಡ ಮಾತನಾಡಿ, ಭೂಮಿಗಾಗಿ ಹೋರಾಟ ಮಾಡಿದ ಶಾಂತವೇರಿ ಗೋಪಾಲ ಗೌಡ, ಸದಾಶಿವರಾಯರಂತಹ ಮಹಾನ್ ವ್ಯಕ್ತಿಗಳನ್ನು ನೆನೆಸಿಕೊಳ್ಳಬೇಕು.ನಮ್ಮ ಈ ಹೋರಾಟವನ್ನು ಯಾರೇ ಹತ್ತಿಕ್ಕಲು ಸಾಧ್ಯವಿಲ್ಲ, ನಾವು ಹೆದರುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಹಾ.ಪಧ್ಮನಾಭ್, ಬಾಳೆಹಳ್ಳಿ ಪ್ರಭಾಕರ್, ಸಹಕಾರಿ ಧುರೀಣ ವಿಜಯದೇವ್, ಕಿರಣ್ ಕುಮಾರ್, ಶಿಮುಲ್ ವಿಧ್ಯಾದರ್, ಆನಂದ್, ಪ್ರಶಾಂತ್ ಸಾಗರ್, ಯೋಗೀಶ್, ಕೆಳಕೆರೆ ದಿವಾಕರ್ ಮುಖಂಡರಾದ ಜಿಪಂ ಮಾಜಿ ಸದಸ್ಯ ಡಾ.ಟಿ.ಎಲ್. ಸುಂದರೇಶ್, ತಾಪಂ ಮಾಜಿ ಅಧ್ಯಕ್ಷೆ ಜೀನಾ ವಿಕ್ಟರ್ ಡಿಸೋಜ, ತಾಪಂ ಮಾಜಿ ಸದಸ್ಯರಾದ ಕಟ್ಟೆಹಕ್ಲು ಕಿರಣ್, ಮಾಳೂರು ಉಮೇಶ್, ಕೊಲ್ಲೂರಯ್ಯ, ಮಟ್ಟಿನಮನೆ ರಾಮಚಂದ್ರ, ಬಿ.ಆರ್.ರಾಘವೇಂದ್ರ ಶೆಟ್ಟಿ, ಹೊರಬೈಲು ರಾಮಕೃಷ್ಣ, ಸುಷ್ಮಾ ಸಂಜಯ್, ಜಯಂತಿ ಕೃಷ್ಣಮೂರ್ತಿ ಮುಂತಾದವರಿದ್ದರು.







