ತಂದೆ ಆರಂಭಿಸಿದ ರಾಜಕೀಯ ಪಕ್ಷದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ ತಮಿಳು ನಟ ವಿಜಯ್

ಚೆನ್ನೈ: ತಾನು ರಾಜಕೀಯ ಸೇರಲಿದ್ದೇನೆಂಬ ಕುರಿತಾದ ಕೆಲ ವರದಿಗಳನ್ನು ಅಲ್ಲಗಳೆದಿರುವ ಖ್ಯಾತ ತಮಿಳು ನಟ ವಿಜಯ್, ತಮ್ಮ ತಂದೆ ಆರಂಭಿಸಿದ ರಾಜಕೀಯ ಪಕ್ಷದ ಜತೆಗೆ ತಾವು ಯಾವುದೇ ಸಂಬಂಧ ಹೊಂದಿಲ್ಲ ಎಂದಿದ್ದಾರಲ್ಲದೆ ಆ ಪಕ್ಷಕ್ಕೆ ಸೇರದಂತೆ ತಮ್ಮ ಅಭಿಮಾನಿಗಳನ್ನು ವಿನಂತಿಸಿದ್ದಾರೆ. ಯಾವುದೇ ರಾಜಕೀಯ ಉದ್ದೇಶಕ್ಕೆ ತಮ್ಮ ಹೆಸರು ಅಥವಾ ಚಿತ್ರಗಳನ್ನು ಬಳಸಿದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ವಿಜಯ್ ಅವರ ತಂದೆ, ಚಿತ್ರ ನಿರ್ದೇಶಕ ಎಸ್ ಎ ಚಂದ್ರಶೇಖರ್ ಅವರು ವಿಜಯ್ ಅವರ ಫ್ಯಾನ್ ಕ್ಲಬ್‍ಗಳಲ್ಲೊಂದಾದ ವಿಜಯ್ ಮಕ್ಕಳ್ ಇಯಕ್ಕಂ ಅನ್ನು ರಾಜಕೀಯ ಪಕ್ಷವಾಗಿ ಚುನಾವಣಾ ಆಯೋಗದ ಬಳಿ ನೋಂದಣಿ ಮಾಡಿ ಅದಕ್ಕೆ 'ಆಲ್ ಇಂಡಿಯಾ ತಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಎಂಬ ಹೆಸರು ನೀಡಿದ ನಂತರ ವಿಜಯ್ ಅವರ ಹೇಳಿಕೆ ಬಂದಿದೆ.
"ನನ್ನ ತಂದೆ ಆರಂಭಿಸಿದ ರಾಜಕೀಯ ಪಕ್ಷದ ಜತೆಗೆ ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ, ಆ ಪಕ್ಷಕ್ಕೂ ನಮ್ಮ 'ಇಯಕ್ಕಂ'ಗೂ (ಫ್ಯಾನ್ ಕ್ಲಬ್) ಯಾವುದೇ ಸಂಬಂಧವಿಲ್ಲ,'' ಎಂದು ವಿಜಯ್ ಹೇಳಿದ್ದಾರೆ.
ಗುರುವಾರ ತಮ್ಮ ಹೊಸ ಪಕ್ಷ ಆರಂಭಿಸಿದ ವಿಜಯ್ ತಂದೆ ಚಂದ್ರಶೇಖರ್ ಕೂಡ ಈ ನಿರ್ಧಾರದ ಹಿಂದೆ ತಮ್ಮ ಪುತ್ರನ ಪಾತ್ರವಿಲ್ಲ ಆದರೆ ವಿಜಯ್ ಹೆಸರಿನಲ್ಲಿ ಸಮಾಜಸೇವೆ ಮಾಡುತ್ತಿರುವ ಯುವಕರನ್ನು ಗುರುತಿಸಲು ಈ ನಿರ್ಧಾರ ಎಂದು ಹೇಳಿದ್ದರು.





