ಸಿಪ್ಪರ್ ಬಳಸಲು ಅನುಮತಿ ಕೋರಿ ಸ್ಟ್ಯಾನ್ ಸ್ವಾಮಿ ಸಲ್ಲಿಸಿದ ಅಪೀಲಿನ ವಿಚಾರಣೆ 20 ದಿನ ಮುಂದೂಡಿದ ಕೋರ್ಟ್
ಪಾರ್ಕಿನ್ಸನ್ಸ್ ಕಾಯಿಲೆ ಹಿನ್ನೆಲೆ

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿ ತಲೋಜ ಸೆಂಟ್ರಲ್ ಜೈಲ್‍ನಲ್ಲಿರುವ ಮಾನವ ಹಕ್ಕು ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಅವರು ಪಾರ್ಕಿನ್ಸನ್ಸ್ ಕಾಯಿಲೆಯ ಹಿನ್ನೆಲೆಯಲ್ಲಿ ಕೈಯ್ಯಲ್ಲಿ ಗ್ಲಾಸ್ ಹಿಡಿದುಕೊಳ್ಳಲು ಸಾಧ್ಯವಿಲ್ಲದೇ ಇರುವುದರಿಂದ ಸ್ಟ್ರಾ ಮತ್ತು ಸಿಪ್ಪರ್ ಬಳಕೆಗೆ ಅನುಮತಿ ಕೋರಿ ಸಲ್ಲಿಸಿರುವ ಅಪೀಲಿನ ಮೇಲಿನ ವಿಚಾರಣೆಯ ದಿನಾಂಕವನ್ನು 20 ದಿನಗಳ ನಂತರದ ತಾರೀಕಿಗೆ ಮುಂಬೈನ ವಿಶೇಷ ನ್ಯಾಯಾಲಯ ಶುಕ್ರವಾರ ನಿಗದಿ ಪಡಿಸಿದೆ.
ಸ್ವಾಮಿ ಅವರು ಸಲ್ಲಿಸಿದ ಅಪೀಲಿಗೆ ಉತ್ತರ ನೀಡಲು ಪ್ರಾಸಿಕ್ಯೂಶನ್ 20 ದಿನಗಳನ್ನು ಕೋರಿದೆ. ಅವರ ಅಪೀಲಿನ ಮೇಲಿನ ವಿಚಾರಣೆ ನವೆಂಬರ್ 26ರಂದು ನಡೆಯಲಿದೆ.
ಸ್ವಾಮಿ ಅವರು ಪಾರ್ಕಿನ್ಸನ್ಸ್ ಕಾಯಿಲೆ ಹೊರತಾಗಿ ಶ್ರವಣ ದೋಷದಿಂದ ಬಳಲುತ್ತಿರುವುದರಿಂದ ಹಾಗೂ ಜೈಲಿನಲ್ಲಿ ಹಲವು ಬಾರಿ ಬಿದ್ದಿರುವುದರಿಂದ ಹಾಗೂ ಎರಡು ಬಾರಿ ಹರ್ನಿಯಾ ಶಸ್ತ್ರಕ್ರಿಯೆ ಅವರಿಗೆ ನಡೆದಿರುವುದರಿಂದ ಈಗಲೂ ಹೊಟ್ಟೆಯ ಕೆಳಭಾಗದಲ್ಲಿ ನೋವಿರುವುದರಿಂದ ಅವರ ಅಪೀಲನ್ನು ವೈದ್ಯಕೀಯ ಕಾರಣಗಳನ್ನು ನೀಡಿ ಸಲ್ಲಿಸಲಾಗಿದೆ.
ಸ್ವಾಮಿ ಈ ಹಿಂದೆ ಆರೋಗ್ಯ ಕಾರಣಗಳನ್ನು ನೀಡಿ ಮಧ್ಯಂತರ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರೂ ಅಕ್ಟೋಬರ್ 23ರಂದು ವಿಶೇಷ ಎನ್‍ಐಎ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಸ್ವಾಮಿ ಅವರನ್ನು ಜೈಲಿನ ಆಸ್ಪತ್ರೆ/ಡಿಸ್ಪೆನ್ಸರಿ ವಿಭಾಗದ ಪ್ರತ್ಯೇಕ ಸೆಲ್‍ನಲ್ಲಿರಿಸಲಾಗಿದೆ ಹಾಗೂ ಅವರು ಜೈಲಿನಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ತಲೋಜ ಸೆಂಟ್ರಲ್ ಜೈಲ್‍ನ ಸುಪರಿಂಟೆಂಡೆಂಟ್ ಈ ಹಿಂದೆ ನೀಡಿದ ಮಾಹಿತಿಯನ್ನೂ ನ್ಯಾಯಾಲಯ ಉಲ್ಲೇಖಿಸಿದೆ.
83 ವರ್ಷದ ಸ್ವಾಮಿ ಅವರನ್ನು ಎನ್‍ಐಎ ಅಕ್ಟೋಬರ್ 8ರಂದು ರಾಂಚಿಯಲ್ಲಿ ಬಂಧಿಸಿತ್ತು.







