ಕಾಪು ತಾಲೂಕಿನಲ್ಲಿ ವಿಶ್ವಕರ್ಮ ಸಮುದಾಯದ ಕೆಲವರ ಮತಾಂತರ: ಮಲವಳ್ಳಿ ಶ್ರೀನಿವಾಸ್ ಆರೋಪ

ಉಡುಪಿ, ನ.7: ಕಾಪು ತಾಲೂಕಿನಲ್ಲಿ ವಿಶ್ವಕರ್ಮ ಸಮುದಾಯ ಕೆಲವು ಮಂದಿ ಮತಾಂತರಗೊಳ್ಳುತ್ತಿದ್ದು, ಸಮಾಜದ ಕೆಲವೊಂದು ದುರ್ಬಲತೆ ಯನ್ನು ಮುಂದಿಟ್ಟುಕೊಂಡು ಬಲತ್ಕಾರವಾಗಿ ಮತಾಂತರ ಮಾಡುವ ಕೆಲಸ ನಡೆಯು ತ್ತಿದೆ. ಕಳೆದ 10ವರ್ಷಗಳಲ್ಲಿ ಸುಮಾರು 40-45 ಕುಟುಂಬಗಳು ಈ ರೀತಿ ಮತಾಂತರಗೊಂಡಿವೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ಅಧ್ಯಕ್ಷ ಮಲವಳ್ಳಿ ಶ್ರೀನಿವಾಸ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ವಿಶ್ವಕರ್ಮ ಸಮುದಾಯದವರು ಮತಾಂತರಗೊಳ್ಳುತ್ತಿರುವುದಕ್ಕೆ ಸರಕಾರ ಅಥವಾ ವ್ಯವಸ್ಥೆ ಮೇಲೆ ಆರೋಪ ಮಾಡಬೇಕೇ ಎಂಬುದು ಗೊತ್ತಾಗುತ್ತಿಲ್ಲ. ನಮ್ಮನ್ನು ಆಳುವ ಸರಕಾರಗಳು ಸಾಮಾಜಿಕ ನ್ಯಾಯ ದೊಂದಿಗೆ ಸೌಲಭ್ಯಗಳು ಮತ್ತು ಪಂಚ ಕಸುಬುಗಳನ್ನು ಉಳಿಸುವಂತಹ ಕೆಲಸ ಮಾಡುತ್ತಿದ್ದರೆ ನಮ್ಮ ಸಮುದಾಯದ ಕೆಲವು ಮಂದಿ ಈ ರೀತಿ ಮತಾಂತರ ಆಗುತ್ತಿರಲ್ಲಿವೇನೊ ಎಂಬ ನೋವು ಕಾಡುತ್ತಿದೆ ಎಂದರು.
ಅನೇಕ ಪರಂಪರೆ ಹೊಂದಿರುವ ಹಾಗೂ ದೇಶಕ್ಕೆ ಬಹಳದೊಡ್ಡ ಸಾಂಸ್ಕೃತಿಕ ಕೊಡುಗೆ ನೀಡಿರುವ ವಿಶ್ವಕರ್ಮದಂತಹ ಸಮಾಜದಲ್ಲಿರುವ ಯಾರು ಕೂಡ ಮತಾಂತರ ಆಗುವ ಕೆಲಸ ಮಾಡಬಾರದು. ಬಲತ್ಕಾರವಾಗಿ ಮತಾಂತರ ಮಾಡುವುದನ್ನು ನಿಲ್ಲಿಸಬೇಕು. ಸರಕಾರ ಅಲ್ಲಿನ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸುವ ಕೆಲಸ ಮಾಡಬೆೀಕು ಎಂದು ಅವರು ಒತ್ತಾಯಿಸಿದರು.
ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದ ಗರಿಷ್ಟ ನಾಲ್ಕು ಮಂದಿಗೆ ವಿವಿಧ ಇಲಾಖೆಗಳಲ್ಲಿ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಬೇಕು. ಆ ಮೂಲಕ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ವನ್ನು ಒದಗಿಸೇಕು ಎಂದು ಅವರು ಆಗ್ರಹಿಸಿದರು.
ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದ ವಿಶ್ವಕರ್ಮ ಸಮಾಜದ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ಸರಕಾರ ಒದಗಿಸಿಲ್ಲ. ಆದುದರಿಂದ ಕೂಡಲೇ ಈ ಕುಟುಂಬಗಳಿಗೆ ಪರಿಹಾರ ಒದಗಿ ಸುವ ಕಾರ್ಯವನ್ನು ಸರಕಾರ ಮಾಡಬೇಕು. ಕುಂದಾಪುರ, ಉಡುಪಿ ಬ್ರಹ್ಮಾವರ, ಕಾರ್ಕಳ ಸೇರಿದಂತೆ ಜಿಲ್ಲೆಯಾದ್ಯಂತ ಯುವಘಟಕವನ್ನು ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ನಾಯಕ ನೇರಂಬಳ್ಳಿ ರಮೇಶ್ ಆಚಾರ್ಯ, ಬಾರಕೂರು ಗಂಗಾಧರ ಆಚಾರ್ಯ, ಯುವಘಟಕದ ಜಿಲ್ಲಾಧ್ಯಕ್ಷ ರಾಮಕೃಷ್ಣ ಆಚಾರ್ಯ, ಕಾನೂನು ಸಲಹೆಗಾರ ಸಂತೋಷ್ ಮೂಡುಬೆಳ್ಳೆ ಉಪಸ್ಥಿತರಿದ್ದರು.







