ನ.8: ಯಕ್ಷಗಾನ ಅಕಾಡಮಿ ಪ್ರಶಸ್ತಿ ಪ್ರದಾನ
ಮಂಗಳೂರು, ನ.7: ಕರ್ನಾಟಕ ಯಕ್ಷಗಾನ ಅಕಾಡಮಿಯ ವತಿಯಿಂದ 2019ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ ನ. 8ರಂದು ಸಂಜೆ 3ಕ್ಕೆ ನಗರದ ತುಳು ಸಾಹಿತ್ಯ ಅಕಾಡಮಿಯ ಕಲಾಭವನದಲ್ಲಿ ನಡೆಯತು.
ಕನ್ನಡ ಮತ್ತು ಸಂಸ್ಕೃತಿಯ ಸಚಿವ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟನೆ ಮತ್ತು ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನೀಡಲಿದ್ದಾರೆ.
ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಪ್ರಸ್ತಾವನೆಗೈಯಲಿದ್ದಾರೆ. ಅತಿಥಿಗಳಾಗಿ ಪಾಲಿಕೆ ಆಯುಕ್ತ ದಿವಾಕರ್ ಪಾಂಡೇಶ್ವರ, ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಭಾಗವಹಿಸಲಿದ್ದಾರೆ. 2019ನೇ ಸಾಲಿನ ಗೌರವ ಪ್ರಶಸ್ತಿಯನ್ನು ಡಾ. ಚಂದ್ರಶೇಖರ ದಾಮ್ಗೆ ಅವರಿಗೆ ಪ್ರದಾನಿಸಲಾಗುವುದು.
ಯಕ್ಷಗಾನ ಅಕಾಡಮಿ ಹಾಗೂ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷರು ಹಾಗೂ ಸದಸ್ಯರಾದ ರಾಧಾಕೃಷ್ಣ ಕಲ್ಚಾರ್, ಕದ್ರಿ ನವನೀತ ಶೆಟ್ಟಿ, ದಾಮೋದರ ಶೆಟ್ಟಿ, ಕುಳಾಯಿ ಮಾಧವ ಭಂಡಾರಿ ಹಾಗೂ ದಿನೇಶ್ ರೈ ಕಡಬ ಅವರ ಅರ್ಥಗಾರಿಕೆಯಲ್ಲಿ ‘ಜಾಂಬವತಿ ಕಲ್ಯಾಣ’ ಕನ್ನಡ-ತುಳು ಯಕ್ಷಗಾನ ತಾಳಮದ್ದಳೆಯನ್ನು ಬಳಿಕ ನಡೆಸಲಾಗುವುದು. ಭಾಗವತ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಕೃಷ್ಣಪ್ರಕಾಶ ಉಳಿತ್ತಾಯ, ಪೂರ್ಣೇಶ್ ಆಚಾರ್ಯ ಹಿಮ್ಮೇಳನದಲ್ಲಿ ಪಾಲ್ಗೊಳ್ಳಲಿರುವರು ಎಂದು ಪ್ರಕಟನೆ ತಿಳಿಸಿದೆ.







