ದೀಪಾವಳಿಗೆ 'ಹಸಿರು ಪಟಾಕಿ' ಬಳಸಲು ಸರಕಾರ ನಿರ್ದೇಶನ: ಗೊಂದಲದಲ್ಲಿ ರಾಜ್ಯದ ಜನತೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ. 7: ಕೋವಿಡ್-19 ಸೋಂಕಿತರ ಆರೋಗ್ಯದ ಹಿತದೃಷ್ಟಿಯಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರಕಾರ ಮಾಲಿನ್ಯ ನಿಯಂತ್ರಣಕ್ಕಾಗಿ `ಹಸಿರು ಪಟಾಕಿ' ಬಳಕೆ ಮತ್ತು ಮಾರಾಟಕ್ಕಷ್ಟೇ ಅನುಮತಿ ನೀಡಿದೆ. ಆದರೆ, `ಹಸಿರು ಪಟಾಕಿ' ಹೇಗಿರುತ್ತವೆ? ಅವು ರಾಜ್ಯದಲ್ಲಿ ಸಿಗುತ್ತವೆಯೇ? ಎಂದರೆ ರಾಜ್ಯಕ್ಕೆ ಹಸಿರು ಪಟಾಕಿಯೇ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿತ ಅಧಿಕಾರಿಗಳಿಗೆ ಹಸಿರು ಪಟಾಕಿಯ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ ಎಂಬ ಅಂಶವು ಇದೀಗ ಬಯಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ಹಸಿರು ಪಟಾಕಿ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ, ರಾಜ್ಯದ ಮಾರುಕಟ್ಟೆಗೆ ಹಸಿರು ಪಟಾಕಿಯೇ ಬಂದಿಲ್ಲ ಎನ್ನಲಾಗಿದೆ. ಹಸಿರು ಪಟಾಕಿ ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಮಾಲಿನ್ಯ ಕಾರಕ ಕಣಗಳನ್ನು ಹೊರಸೂಸುತ್ತವೆ ಎಂಬುದಷ್ಟೇ ನಂಬಿಕೆಯಾಗಿದೆ.
ಹಸಿರು ಪಟಾಕಿ ಬಗ್ಗೆ ಜನರಲ್ಲಿ ಕುತೂಹಲವಿದೆ. ಮಾತ್ರವಲ್ಲ, ಅಷ್ಟೇ ಗೊಂದಲವೂ ಇದೆ. ಆದರೆ, ಸಾಮಾನ್ಯ ಪಟಾಕಿಯಂತೆ ಇರುವ ಹಸಿರು ಪಟಾಕಿಗಳು ಕಡಿಮೆ ಶಬ್ದ ಮತ್ತು ಕಡಿಮೆ ಮಾಲಿನ್ಯವನ್ನುಂಟು ಮಾಡುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಹಸಿರು ಪಟಾಕಿಗಳ ಬಗ್ಗೆ ಯಾವುದೇ ನಿಖರತೆ ಇಲ್ಲ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಅನಿಸಿಕೆ.
ಬೆಳಕಿನ ಹಬ್ಬ ದೀಪಾವಳಿಯನ್ನು ದೀಪಗಳೊಂದಿಗೆ ಶಬ್ದ ಮತ್ತು ಮಾಲಿನ್ಯ ರಹಿತವಾಗಿ ಸಂಭ್ರಮದಿಂದ ಆಚರಿಸಲು ಅನುಕೂಲಕರ ವಾತಾವರಣ ನಿರ್ಮಿಸಿದಂತಾಗಿದೆ. ಜನರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಪಟಾಕಿಯ ಬಗ್ಗೆ ಜಾಗೃತಿ ಮೂಡುತ್ತಿದ್ದು, ಪರಿಸರ ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ರಾಜ್ಯ ಸರಕಾರ ಪಟಾಕಿ ನಿಷೇಧಿಸಿ `ಹಸಿರು ಪಟಾಕಿ' ಮಾರಾಟಕಷ್ಟೇ ಅನುಮತಿ ನೀಡಿರುವ ಕ್ರಮ ಸ್ವಾಗತಾರ್ಹ'
-ಶ್ರೀನಿವಾಸಲು, ಸದಸ್ಯ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ







