ಮೂರೂರು ವಿಷ್ಣು ಭಟ್ಟರಿಗೆ ಚಿಟ್ಟಾಣಿ ಪ್ರಶಸ್ತಿ ಪ್ರದಾನ
![ಮೂರೂರು ವಿಷ್ಣು ಭಟ್ಟರಿಗೆ ಚಿಟ್ಟಾಣಿ ಪ್ರಶಸ್ತಿ ಪ್ರದಾನ ಮೂರೂರು ವಿಷ್ಣು ಭಟ್ಟರಿಗೆ ಚಿಟ್ಟಾಣಿ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2020/11/7/266492-1604759952.jpg)
ಉಡುಪಿ, ನ.7: ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗದ ವತಿಯಿಂದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಸ್ತ್ರೀವೇಷಧಾರಿ ಮೂರೂರು ವಿಷ್ಣು ಭಟ್ ಅವರಿಗೆ ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಕಲಾವಿದರು ಇನ್ನು ಹೆಚ್ಚಿನ ಶ್ರದ್ಧೆ ವಹಿಸಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಭಿಮಾನಿ ಬಳಗದ ಗೌರವಾಧ್ಯಕ್ಷರಾಗಿದ್ದ ಟಿ.ವಿ.ರಾವ್ ಪ್ರಶಸ್ತಿಯನ್ನು ಹವ್ಯಾಸಿ ಹಿಮ್ಮೇಳ ವಾದಕ, ವೇಷಧಾರಿ ಅಜಿತ್ ಕುಮಾರ್ ಅಂಬಲಪಾಡಿ ಅವರಿಗೆ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಮಾಜಿ ಅಧ್ಯಕ್ಷ ಗಣೇಶ್ ರಾವ್, ಉಡುಪಿ ಹೈಟೆಕ್ ಆಸ್ಪತ್ರೆಯ ನಿರ್ದೇಶಕ ಡಾ. ಟಿ.ಎಸ್.ರಾವ್, ಸುಬ್ರಹ್ಮಣ್ಯ ಚಿಟ್ಟಾಣಿ ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಅಗಲಿದ ಮಲ್ಪೆ ವಾಸುದೇವ ಸಾಮಗ ಅವರಿಗೆ ನುಡಿನಮನ ಸಲ್ಲಿಸಿದರು.
ಅಭಿಮಾನಿ ಬಳಗದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಗೋಪಿಕೃಷ್ಣ ರಾವ್ ವಂದಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.