ಬಿಹಾರದಲ್ಲಿ ಮಹಾಘಟಬಂಧನಕ್ಕೆ ಗೆಲುವು: ಚುನಾವಣೋತ್ತರ ಸಮೀಕ್ಷೆ
ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ

ಹೊಸದಿಲ್ಲಿ,ನ.7: ರಾಷ್ಟ್ರರಾಜಕಾರಣದ ದಿಕ್ಸೂಚಿಯೆಂದೇ ಬಣ್ಣಿಸಲಾಗಿರುವ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಪ್ರತಿಪಕ್ಷ ಮೈತ್ರಿಕೂಟ ಮಹಾಘಟಬಂಧನ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆಯೆಂದು ಟೈಮ್ಸ್‌ನೌ-ಸಿ ವೋಟರ್ ಸೇರಿದಂತೆ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ.ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಎನ್‌ಡಿಎ ಮೈತಿಕೂಟಕ್ಕೆ ಹಿನ್ನಡೆಯಾಗಿರುವುದಾಗಿ ಅವು ಹೇಳಿವೆ.ಆದಾಗ್ಯೂ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಸಾಧ್ಯತೆ ತೀರಾ ಕಡಿಮೆ ಎಂದು ಅದು ಹೇಳಿದೆ. ಬಿಹಾರ ವಿಧಾನಸಭೆಯ ಕೊನೆಯ ಹಂತದ ಮತದಾನ ಇಂದು ಪೂರ್ಣಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ,ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ 120 ಸ್ಥಾನಗಳನ್ನು ಗೆಲ್ಲಲಿದೆಯೆಂದು ಟೈಮ್ಸ್ ನೌ-ಸಿವೋಟರ್ ಸಮೀಕ್ಷೆ ತಿಳಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 116 ಸ್ಥಾನಗಳನ್ನು ಗೆಲ್ಲಲಿದೆ. ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ)ಕ್ಕೆ ಕೇವಲ ಒಂದು ಸ್ಥಾನ ದೊರೆಯಲಿದೆ, ಉಳಿದ ಆರು ಸ್ಥಾನಗಳು ಇತರರ ಪಾಲಾಗಲಿವೆ ಎಂದು ಟೈಮ್ಸ್ ನೌ-ಸಿವೋಟರ್ ಸಮೀಕ್ಷೆ ತಿಳಿಸಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 123 ಸ್ಥಾನಗಳ ಅಗತ್ಯವಿದೆ. ರಿಪಬ್ಲಿಕ್‌ಟಿವಿ-ಜನ್ ಕಿ ಬಾತ್ ಸಮೀಕ್ಷೆಯು ಎನ್‌ಡಿಎ ಮೈತ್ರಿಕೂಟಕ್ಕೆ 91ರಿಂದ 117 ಸ್ಥಾನಗಳನ್ನು ಹಾಗೂ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ಗೆ 118ರಿಂದ 138 ಸ್ಥಾನಗಳನ್ನು ನೀಡಿದೆ.ಎಲ್‌ಜೆಪಿ 5-8 ಸ್ಥಾನಗಳನ್ನು ಗೆಲ್ಲಲಿದೆ ಹಾಗೂ 3-8 ಸ್ಥಾನಗಳು ಇತರರ ಪಾಲಾಗಲಿವೆಯೆಂದು ಅದು ಭವಿಷ್ಯ ನುಡಿದಿದೆ.
ಟುಡೇಸ್ ಚಾಣಕ್ಯ ಸಮೀಕ್ಷೆ ಮಾತ್ರ ಮಹಾಘಟಬಂಧನ್ 169-191 ಸ್ಥಾನಗಳೊಂದಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆಯೆಂದು ಹೇಳಿದೆ. ಎನ್‌ಡಿಎ ಮೈತ್ರಿಕೂಟವು ಕೇವಲ 44-56 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆಯೆಂದು ಅದು ತಿಳಿಸಿದೆ.
ಉಳಿದಂತೆ ಟಿವಿ9-ಭಾರತ್ ವರ್ಷ್ ಹಾಗೂ ಎಬಿಪಿ-ಸಿ ವೋಟರ್ ನ ಸಮೀಕ್ಷೆಗಲು ಕೂಡಾ ಮಹಾಘಟಬಂಧನ್ ಅತಿದೊಡ್ಡ ಪಕ್ಷವಾಗಿ ಮೂಡಿಬರಲಿದ್ದು.ಎನ್‌ಡಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗಿಲಿದೆಯೆಂದು ಹೇಳಿವೆ.
ಬಿಹಾರ ವಿಧಾನಸಭೆಗೆ ಅಕ್ಟೋಬರ್ 28. ನವೆಂಬರ್ 3 ಹಾಗೂ ನವೆಂಬರ್ 7 ಹೀಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಘಟಬಂಧನ್‌ನ ಅಂಗಪಕ್ಷಗಳಾದ ಆರ್‌ಜೆಡಿ 144, ಕಾಂಗ್ರೆಸ್ 70 ಹಾಗೂ ,ಎಡಪಕ್ಷಗಳು 19 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.
ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು 115 ಹಾಗೂ ಬಿಜೆಪಿ 110 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದವು. ಜನ ಅಧಿಕಾರ ಪಕ್ಷದ ಅಧ್ಯಕ್ಷ ಪಪ್ಪುಯಾದವ್ ನೇತೃತ್ವದ ಪಿಡಿಎ ಮೈತ್ರಿಕೂಟ ಹಾಗೂ ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ್ ಆಝಾದ್ ಅವರ ಆಝಾದ್ ಸಮಾಜ್ ಪಾರ್ಟಿ ಕೂಡಾ ಚುನಾವಣಾ ಕಣದಲ್ಲಿದ್ದವು.







