ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪಿನಿಂದ ದಲಿತರಿಗೆ ಅನ್ಯಾಯ: ಡಿಎಚ್‍ಎಸ್
ಬೆಂಗಳೂರು, ನ.7: ದಲಿತರ ಮೇಲೆ ಜಾತಿ ನಿಂದನೆ, ದೌರ್ಜನ್ಯ, ಅಪಮಾನಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ನೀಡುವ ಎಲ್ಲ ದೂರುಗಳನ್ನು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಪರಿಗಣಿಸಲು ಸಾಧ್ಯವಿಲ್ಲವೆಂಬ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದೆಯನ್ನು ಅಭದ್ರಗೊಳಿಸುವುದು ಹಾಗೂ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದಂತಹದ್ದೆಂದು ದಲಿತ ಹಕ್ಕುಗಳ ಸಮಿತಿ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. 2018ರಲ್ಲಿ 1219 ಪ್ರಕರಣಗಳು, 2019ರಲ್ಲಿ 1187 ಹಾಗೂ 2020ರ ಆಗಸ್ಟ್ ವರೆಗೆ 899 ಪ್ರಕರಣಗಳು ದಾಖಲಾಗಿದೆ. ಅದರಲ್ಲಿ 88 ಅತ್ಯಾಚಾರಗಳು, 45 ಕೊಲೆಗಳು ದಾಖಲಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ವಿಜಯಪುರದ ಪಿ.ಎಚ್.ಬೂದಿಹಾಳದ ಅನಿಲ್ ಇಂಗಳಿಗೆ ಕೊಲೆ, ತುಮಕೂರಿನ ತಿಪ್ಪಾಪುರ ಹನುಮಂತಪ್ಪನ ಮೇಲೆ ದೌರ್ಜನ್ಯ, ಹಗರಿಬೊಮ್ಮನಹಳ್ಳಿ ದಲಿತ ಮಹಿಳೆ ಹುಲಿಗೆಮ್ಮ ಕೊಲೆ ಈ ರೀತಿ ನೂರಾರು ಪ್ರಕರಣಗಳಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ ಮೇಲ್ಜಾತಿಯವರ ಪರ ವಹಿಸಿ ಕೌಂಟರ್ ಕೇಸ್ ಹಾಕಿರುವುದೇ ಸಾಕ್ಷಿಗಳಾಗಿವೆ. ಈ ಪ್ರವೃತ್ತಿ ಎಲ್ಲ ಪೊಲೀಸ್ ಠಾಣೆಗಳಲ್ಲೂ ಸಾಮಾನ್ಯವಾಗಿವೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ದಲಿತರ ಮೇಲಿನ ಎಲ್ಲ ದೌರ್ಜನ್ಯಗಳನ್ನು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಪರಿಗಣಿಸಲು ಸಾಧ್ಯವಿಲ್ಲ ಎಂಬ ತೀರ್ಪು ದಲಿತರ ಮೇಲೆ ಮತ್ತಷ್ಟು ದೌರ್ಜನ್ಯ ನಡೆಸಲು ಪುಷ್ಟಿಕೊಟ್ಟಂತಾಗಿದೆ. ಹೀಗಾಗಿ ಈ ತೀರ್ಪು ವಾಪಸ್ಸಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಬೇಕೆಂದು ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಒತ್ತಾಯಿಸಿದ್ದಾರೆ.







