ನಿರುಪಯುಕ್ತ ವಸ್ತುಗಳ ನೇರ ವಿಲೇವಾರಿಗೆ ಪೊಲೀಸರಿಗೆ ಅವಕಾಶ

ಬೆಂಗಳೂರು, ನ.7: ರಾಜ್ಯದ ಪೊಲೀಸರು ಇನ್ನು ಮುಂದೆ ಹಳೆ ಶೂ, ಪಾಲಿಶ್ ಡಬ್ಬ, ಹರಿದ ಸಮವಸ್ತ್ರ ಕಿಟ್ ಕಳೆದುಕೊಂಡರೆ ಶಿಸ್ತು ಕ್ರಮ ಎದುರಿಸಬೇಕಾಗಿಲ್ಲ. ನಿರುಪಯುಕ್ತವಾದಾಗ ಅವರೇ ನೇರವಾಗಿ ವಿಲೇವಾರಿ ಮಾಡಲು ಅವಕಾಶ ನೀಡಿ ಸರಕಾರ ಆದೇಶಿಸಿದೆ.
ಪೊಲೀಸ್ ಇಲಾಖೆಯಲ್ಲಿ ಕಾನಿಸ್ಟೇಬಲ್‍ನಿಂದ ಉಪ ನಿರೀಕ್ಷಕರ ಹುದ್ದೆಯ ತನಕ ಅಧಿಕಾರಿಗಳು ಸರಕಾರ ನೀಡುತ್ತಿರುವ ವಿವಿಧ ಸಮವಸ್ತ್ರ, ಶೂ, ಪಾಲೀಶ್ ಡಬ್ಬ, ಬೆಲ್ಟ್ ಮುಂತಾದವುಗಳನ್ನು ಬಳಸಿದ ಬಳಿಕ ನಿರುಪಯುಕ್ತವಾದಾಗ ಬಿಸಾಕುವಂತಿರಲಿಲ್ಲ. ಎರಡು ಅಥವಾ ನಾಲ್ಕು ವರ್ಷಕ್ಕೊಮ್ಮೆ ಡಿವೈಎಸ್‍ಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ನಡೆಯುವ ಪರಿವೀಕ್ಷಣಾ ಪರೇಡ್‍ನಲ್ಲಿ ಹಿಂತಿರುಗಿಸಬೇಕಿತ್ತು. ಕಳೆದು ಹೋಗಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗಿತ್ತು.
ಸಂರಕ್ಷಣೆ ಸವಾಲು: ನಿರುಪಯುಕ್ತ ಸೊತ್ತುಗಳನ್ನು ಕಳೆದು ಹೋಗದಂತೆ ಎಚ್ಚರಿಕೆಯಿಂದ ಸಂರಕ್ಷಿಸಿಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಪೊಲೀಸರ ಸಮಸ್ಯೆ ಅರ್ಥ ಮಾಡಿಕೊಂಡ ಡಿಜಿಪಿ ಪ್ರವೀಣ್ ಸೂದ್ ಸರಕಾರಕ್ಕೆ ಮನವರಿಕೆ ಮಾಡಿ ಹಳೇ ನಿಯಮ ರದ್ಧು ಮಾಡಿಸಿದ್ದಾರೆ. ಪಿಸ್ತೂಲ್, ವಾಕಿಟಾಕಿ, ಲಾಠಿ ಮತ್ತಿತರೆ ಸೊತ್ತುಗಳನ್ನು ನಿವೃತ್ತಿ ಸಂದರ್ಭ ಇಲಾಖೆಗೆ ಹಿಂತುರಿಗಿಸಬೇಕು ಎನ್ನುವ ನಿಯಮ ಈ ಹಿಂದಿನಂತೆ ಮುಂದುವರಿಯಲಿದೆ.





