ಡೆಲ್ಲಿ ಕ್ಯಾಪಿಟಲ್ಸ್ ಸನ್‌ರೈಸರ್ಸ್ ಹೈದರಾಬಾದ್ ಸೆಣಸಾಟ
ಇಂದು ಎರಡನೇ ಕ್ವಾಲಿಫೈ ಯರ್ ಗೆದ್ದ ತಂಡ ಫೈನಲ್‌ಗೆ

ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ 2019ರ ಐಪಿಎಲ್‌ನಲ್ಲಿದ್ದ ಸ್ಥಿತಿಯಲ್ಲೇ ಇದೆ. ಕಳೆದ ವರ್ಷವೂ ಕ್ವಾಲಿಫೈಯರ್-2ರ ಹಂತಕ್ಕೆ ತಲುಪಿದ್ದ ಡೆಲ್ಲಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೂದಲೆಳೆ ಅಂತರದ ಸೋತಿತ್ತು. ಈ ಬಾರಿಯ ಐಪಿಎಲ್‌ನಲ್ಲೂ ಮತ್ತೊಮ್ಮೆ ಕ್ವಾಲಿಫೈಯರ್-2ರಲ್ಲಿ ಕಾಣಿಸಿಕೊಂಡಿದೆ. ಆದರೆ ಪರಿಸ್ಥಿತಿ ಭಿನ್ನವಾಗಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ತಲುಪಿರುವುದಕ್ಕೆ ಈ ಹಂತ ತಲುಪಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 57 ರನ್‌ಗಳಿಂದ ಸೋತಿದ್ದರೂ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಂಡಿದೆ. ಡೆಲ್ಲಿ ಎದುರಾಳಿ ತಂಡ ಇತರ ಎಲ್ಲ ತಂಡಗಳಿಗಿಂತಲೂ ಅನುಭವಿಯಾಗಿದೆ. ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಏರಿಳಿತವನ್ನು ಕಂಡಿದೆ. ದುಬೈನಲ್ಲಿ ಡೆಲ್ಲಿ ವಿರುದ್ಧ ಜಯ ಸಾಧಿಸಿ ತನ್ನ ಅಭಿಯಾನ ಆರಂಭಿಸಿದ್ದ ಹೈದರಾಬಾದ್ ಈ ವರ್ಷ ಡೆಲ್ಲಿ ವಿರುದ್ಧ ಆಡಿರುವ ಎರಡೂ ಲೀಗ್ ಪಂದ್ಯಗಳಲ್ಲಿ ಜಯಸಾಧಿಸಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಭಾರೀ ಸವಾಲನ್ನು ಎದುರಿಸುತ್ತಿದೆ. ಹೈದರಾಬಾದ್ ವಿರುದ್ಧ ಜಯ ಸಾಧಿಸಬೇಕಾದರೆ ಐಪಿಎಲ್‌ನ ಪ್ಲೇ-ಆಫ್‌ನಲ್ಲಿ ತನ್ನ ಕಳಪೆ ದಾಖಲೆಯಿಂದ ಹೊರಬರಬೇಕಾಗಿದೆ. ಡೆಲ್ಲಿ ಐದು ಐಪಿಎಲ್ ಪ್ಲೇ-ಆಫ್ ಆವೃತ್ತಿಗಳ ಪೈಕಿ ಆರರಲ್ಲಿ ಸೋಲು ಹಾಗೂ ಒಂದರಲ್ಲಿ ಜಯ ಸಾಧಿಸಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಸ್ಥಿತಿಯಲ್ಲಿದ್ದು, ನ.10 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್ ಪಂದ್ಯಕ್ಕೆ ತೇರ್ಗಡೆಯಾಗುವ ಉತ್ಸಾಹದಲ್ಲಿದೆ. ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ಡೆಲ್ಲಿ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಆಲ್ ರೌಂಡರ್‌ಹೋಲ್ಡರ್ ಕೇವಲ 6 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.ಬ್ಯಾಟಿಂಗ್‌ನಲ್ಲೂ ಕೆಲವುನಿರ್ಣಾಯಕ ಇನಿಂಗ್ಸ್ ಆಡಿದ್ದಾರೆ. ರಶೀದ್ ಖಾನ್ ಈ ಬಾರಿಯ ಐಪಿಎಲ್‌ನಲ್ಲಿ ಹೈದರಾ ಬಾದ್ ಪರ ಗರಿಷ್ಠ ವಿಕೆಟ್‌ಗಳನ್ನು (19)ಉರುಳಿಸಿ ದ್ದಾರೆ. ಈ ವರ್ಷ ಡೆಲ್ಲಿ ವಿರುದ್ಧ ಆಡಿರುವ 2 ಪಂದ್ಯಗಳಲ್ಲಿ ರಶೀದ್ 6 ವಿಕೆಟ್‌ಗಳನ್ನು ಪಡೆದಿದ್ದರು. ನಾಯಕ ಡೇವಿಡ್ ವಾರ್ನರ್ ಕಳೆದ 5 ಪಂದ್ಯಗಳಲ್ಲಿ ಒಟ್ಟು 211 ರನ್ ಗಳಿಸಿದ್ದಾರೆ. ಅನ್ರಿಚ್ ನಾರ್ಟ್ಜೆ 8.3ರ ಇಕಾನಮಿಯಲ್ಲಿ ಒಟ್ಟು 19 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಪವರ್‌ಪ್ಲೇ ವೇಳೆ 6 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆದರೆ, ಡೆಲ್ಲಿ ತಂಡವನ್ನು ಕಡೆಗಣಿಸುವಂತಿಲ್ಲ. ಸನ್‌ರೈಸರ್ಸ್ ವಿರುದ್ಧ ಸಂದೀಪ್ ಶರ್ಮಾ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದಾರೆ. 7.06ರ ಇಕಾನಮಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ. 9 ವಿಕೆಟ್‌ಗಳನ್ನು ಕಳೆದ 5 ಪಂದ್ಯಗಳಲ್ಲಿ ಪಡೆದಿದ್ದರು. ಆರ್.ಅಶ್ವಿನ್ ಡೆಲ್ಲಿಯ ಪ್ರಮುಖ ಅಸ್ತ್ರವಾಗಿದ್ದಾರೆ. ಪ್ರತಿ ಪಂದ್ಯದಲ್ಲೂ ಕಡಿಮೆ ರನ್ ನೀಡಿ ವಿಕೆಟ್ ಪಡೆದಿದ್ದಾರೆ. ಈ ವರ್ಷ ಪವರ್ ಪ್ಲೇಯಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಾರೆ 13 ವಿಕೆಟ್ ತನ್ನದಾಗಿಸಿಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ವೃದ್ಧ್ದಿಮಾನ್ ಸಹಾ ಈ ಪಂದ್ಯಕ್ಕೆ ಲಭ್ಯವಿರುತ್ತಾರೆಯೇ ಎಂಬ ಬಗ್ಗೆ ಖಚಿತತೆ ಇಲ್ಲ. ಡೆಲ್ಲಿ ತಂಡದಲ್ಲಿ ವಿದೇಶಿ ಆಟಗಾರರಿಗೆ ಅವಕಾಶ ನೀಡುವ ಕುರಿತು ಸಮಸ್ಯೆ ಇದೆ.







