ಬೈಡನ್‌ಗೆ ವಿಶ್ವ ನಾಯಕರಿಂದ ಅಭಿನಂದನೆಗಳ ಮಹಾಪೂರ

ವಾಷಿಂಗ್ಟನ್, ನ.7: ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಂದಿ ವಿಶ್ವನಾಯಕರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿರುವ ಜೋ ಬೈಡನ್ ಅವರನ್ನು ಅಭಿನಂದಿಸಿದ್ದಾರೆ.
ವಿಶ್ವದ ಪ್ರಬಲ ಆರ್ಥಿಕತೆ ಎನಿಸಿದ ಅಮೆರಿಕದ ಜತೆಗಿನ ಸಂಬಂಧವನ್ನು ಭಾರತ ಇನ್ನಷ್ಟು ಬಲಗೊಳಿಸುವುದನ್ನು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.
"ಅದ್ಭುತ ವಿಜಯಕ್ಕೆ ಅಭಿನಂದನೆಗಳು ಜೋ ಬೈಡನ್! ಉಪಾಧ್ಯಕ್ಷರಾಗಿ ಭಾರತ- ಅಮೆರಿಕ ಸಂಬಂಧ ಬಲಗೊಳಿಸಲು ನೀವು ನೀಡಿದ ಕೊಡುಗೆ ಪ್ರಮುಖ ಹಾಗೂ ಅಮೂಲ್ಯ. ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತೊಮ್ಮೆ ಹೊಸ ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿದ್ದೇನೆ" ಎಂದು ಮೋದಿ ಸಂದೇಶದಲ್ಲಿ ವಿವರಿಸಿದ್ದಾರೆ.
ಟ್ರಂಪ್ ಇನ್ನೂ ಸೋಲು ಒಪ್ಪಿಕೊಂಡಿಲ್ಲವಾದರೂ, ಜೋ ಗೆಲುವಿನ ಬಗ್ಗೆ ಪ್ರಮುಖ ಮಾಧ್ಯಮಗಳು ವರದಿ ಬಿತ್ತರಿಸುತ್ತಿದ್ದಂತೇ ವಿಶ್ವನಾಯಕರಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
"ಅಮೆರಿಕನ್ನರು ಹೊಸ ಅಧ್ಯಕ್ಷರನ್ನು ಚುನಾಯಿಸಿದ್ದಾರೆ. ಜೋ ಬೈಡನ್ ಮತ್ತು ಕಮಲಾ ಹ್ಯಾರೀಸ್ ಅವರಿಗೆ ಅಭಿನಂದನೆಗಳು! ಇಂದಿನ ಸವಾಲುಗಳನ್ನು ಮೆಟ್ಟಿನಿಲ್ಲಲು ನಾವು ಸಾಕಷ್ಟು ಸಾಧನೆ ಮಾಡಬೇಕಿದೆ. ಎಲ್ಲರೂ ಜತೆಗೂಡಿ ಕಾರ್ಯನಿರ್ವಹಿಸೋಣ" ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಟ್ವೀಟಿಸಿದ್ದಾರೆ.
ಜರ್ಮನಿ ಚಾನ್ಸ್‌ಲರ್ ಅಂಜೆಲಾ ಮಾರ್ಕೆಲ್, ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲೆಂಟ್‌ಬರ್ಗ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತೇಹ್ ಅಲ್ ಸಿಸ್ಸಿ ಕೂಡಾ ಬೈಡನ್ ಜೋಡಿಯನ್ನು ಅಭಿನಂದಿಸಿದ್ದಾರೆ. ಟ್ರಂಪ್ ಅವರ ವಾಗ್ದಂಡನೆ ಪ್ರಕ್ರಿಯೆಗೆ ನಿರ್ಣಾಯಕ ಪಾತ್ರ ವಹಿಸಿದ್ದ ಉಕ್ರೇನ್ ಕೂಡಾ ನೂತನ ಅಧ್ಯಕ್ಷರ ಆಯ್ಕೆಗೆ ಸಂತಸ ವ್ಯಕ್ತಪಡಿಸಿದೆ. ವಾಷಿಂಗ್ಟನ್‌ನಲ್ಲಿ ಹೊಸ ಆಡಳಿತ ಯಂತ್ರ ಜಾರಿಗೆ ಬಂದಿರುವ ಬಗ್ಗೆ ಹಲವು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಹರ್ಷ ವ್ಯಕ್ತಪಡಿಸಿವೆ.







