ಟ್ರಂಪ್ ಕಾರ್ಯನಿರ್ವಾಹಕ ಆದೇಶಗಳ ರದ್ದತಿಗೆ ಬೈಡನ್ ಚಿಂತನೆ

ವಾಷಿಂಗ್ಟನ್, ನ.8: ಮುಂದಿನ ವರ್ಷದ ಜನವರಿ 20ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜೋ ಬೈಡನ್ ಹಲವು ಕಾರ್ಯನಿರ್ವಾಹಕ ಆದೇಶಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದ್ದಾರೆ. ತಮ್ಮ ಅಧ್ಯಕ್ಷೀಯ ಅವಧಿ ಸಂಪೂರ್ಣ ಭಿನ್ನ ಆದ್ಯತೆಗಳನ್ನು ಹೊಂದಿರುತ್ತವೆ ಎಂಬ ಸುಳಿವು ನೀಡಿದ್ದಾರೆ.
ಪ್ಯಾರೀಸ್ ಹವಾಮಾನ ಒಪ್ಪಂದಕ್ಕೆ ಮರುಸೇರ್ಪಡೆ ಅವರ ಮೊದಲ ಆದ್ಯತೆ. ಇತ್ತೀಚಿನ ಪ್ರಚಾರದ ಅವಧಿಯಲ್ಲಿ ಕೂಡಾ ಇದಕ್ಕೆ ಅವರು ಬದ್ಧತೆಯನ್ನು ಘೋಷಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವ ಸಂಬಂಧ ಟ್ರಂಪ್ ಜಾರಿಗೊಳಿಸಿದ್ದ ಕಾರ್ಯಾದೇಶ ಕೂಡಾ ರದ್ದಾಗಲಿದೆ. ಹಲವು ಮುಸ್ಲಿಂ ಬಾಹುಳ್ಯದ ದೇಶಗಳಿಂದ ಅಮೆರಿಕಕ್ಕೆ ವಲಸೆ ಬರುವುದನ್ನು ನಿಷೇಧಿಸುವ ಸಂಬಂಧದ ಆದೇಶ ಕೂಡಾ ರದ್ದು ಮಾಡಲು ಚಿಂತನೆ ನಡೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಕ್ರಮವಾಗಿ ಮಕ್ಕಳನ್ನು ಅಮೆರಿಕಕ್ಕೆ ಕರೆತರುವ "ಕನಸುಗಾರ"ರಿಗೆ ಅವಕಾಶ ನೀಡಲು ಕೂಡಾ ಉದ್ದೇಶಿಸಿದ್ದಾರೆ ಎಂದು ಅವರ ಕಾರ್ಯಯೋಜನೆಗಳ ಬಗ್ಗೆ ಅರಿವು ಇರುವ ನಿಕಟವರ್ತಿಗಳು ಹೇಳಿರುವುದಾಗಿ ದಿ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಅಧಿಕಾರ ವರ್ಗಾವಣೆ ವೇಳೆ ಹಲವು ಬಾರಿ ದಿಢೀರ್ ಬದಲಾವಣೆಗಳು ನಿಶ್ಚಿತವಾಗಿದ್ದರೂ, ಟ್ರಂಪ್ ಅವರಿಂದ ಬೈಡನ್‌ಗೆ ಅಧ್ಯಕ್ಷ ಪದವಿ ಹಸ್ತಾಂತರವಾಗುವ ಅವಧಿಯಲ್ಲಿ ಯಾವ ಬದಲಾವಣೆಗಳಾಗುತ್ತವೆ ಎನ್ನುವುದನ್ನು ಇಡೀ ದೇಶ ಎದುರು ನೋಡುತ್ತಿದೆ.
ಅವರ ಕಾರ್ಯಸೂಚಿಯನ್ನು ಹೇಗೆ ಚೆನ್ನಾಗಿ ಕಾರ್ಯರೂಪಕ್ಕೆ ತರಬಹುದು ಎಂಬ ಬಗ್ಗೆ ಅವರ ಸಲಹೆಗಾರರು ಹಲವು ತಿಂಗಳುಗಳಿಂದ ಚಿಂತನ- ಮಂಥನ ನಡೆಸುತ್ತಿದ್ದಾರೆ. ಸೋಮವಾರ ಕೊರೋನ ವೈರಸ್ ಕಾರ್ಯಪಡೆಯೊಂದನ್ನು ಬೈಡನ್ ರಚಿಸಲಿದ್ದಾರೆ ಎಂದು ತಿಳಿದುಬಂದಿದೆ.