ಕೋವಿಡ್ ಆಸ್ಪತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರ ದಾಂಧಲೆ

ಸಾಂದರ್ಭಿಕ ಚಿತ್ರ
ಬಡವೂನ್ (ಉತ್ತರ ಪ್ರದೇಶ), ನ.8: ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ನಿಯೋಜಿತರಾಗಿದ್ದ ತಂತ್ರಜ್ಞರ ಜತೆ ಬಿಜೆಪಿ ಕಾರ್ಯಕರ್ತರು ಸಂಘರ್ಷಕ್ಕೆ ಇಳಿದ ಘಟನೆ ವರದಿಯಾಗಿದೆ. ಇದು ಆಸ್ಪತ್ರೆ ವೈದ್ಯರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ನಡುವಿನ ಮಾತಿನ ಚಕಮಕಿಗೂ ಕಾರಣವಾಯಿತು. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ಮಾಡಿದ ಜನರ ಗುಂಪೊಂದು ರಿಝ್ವಾನ್ ಎಂಬ ತಂತ್ರಜ್ಞರ ಜತೆ ಸಂಘರ್ಷಕ್ಕೆ ಇಳಿಯಿತು ಎಂದು ಎಸ್ಎಸ್ಪಿ ಸಂಕಲ್ಪ್ ಶರ್ಮಾ ಹೇಳಿದ್ದಾರೆ.
ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೊಬ್ಬ ಬಿಜೆಪಿ ಕಾರ್ಯಕರ್ತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಎಂದು ಎಸ್ಎಸ್ಪಿ ಹೇಳಿದ್ದಾರೆ. ಆತನನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್-19 ಆಸ್ಪತ್ರೆಯಲ್ಲಿ ನಿಯೋಜಿತರಾಗಿದ್ದ ಡಾ.ಆರಿಫ್ ಖಾನ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಭಾರ್ತಿ ನಡುವೆ ಶುಕ್ರವಾರ ಮಾತಿನ ಚಕಮಕಿ ನಡೆದಿದೆ ಎಂದು ಪ್ರಾಚಾರ್ಯ ಆರ್.ಪಿ.ಸಿಂಗ್ ಹೇಳಿದ್ದಾರೆ. ಶನಿವಾರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನೂಜ್ ಮಹೇಶ್ವರಿ ನೇತೃತ್ವದ ನಿಯೋಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ಪ್ರಶಾಂತ್ ಅವರನ್ನು ಭೇಟಿ ಮಾಡಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ಇದಾದ ಬಳಿಕ ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ಮಾಡಿ ರಿಝ್ವಾನ್ ಅವರ ಜತೆ ಸಂಘರ್ಷಕ್ಕೆ ಇಳಿದರು ಎಂದು ವಿವರಿಸಿದ್ದಾರೆ.







