ಇಸ್ಲಾಮಿಕ್ ವೈಯಕ್ತಿಕ ಕಾನೂನುಗಳನ್ನು ಸಡಿಲಗೊಳಿಸಿದ ಯುಎಇ

ದುಬೈ: ಅವಿವಾಹಿತ ಜೋಡಿಗಳಿಗೆ ಸಹಬಾಳ್ವೆ ನಡೆಸಲು ಹಾಗೂ ಮದ್ಯದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಲು ಅನುವು ಮಾಡಿಕೊಡುವ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ ಶನಿವಾರ ದೇಶದ ಇಸ್ಲಾಮಿಕ್ ವೈಯಕ್ತಿಕ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಯನ್ನು ಘೋಷಿಸಿದೆ. 'ಮರ್ಯಾದೆ ಹತ್ಯೆ' ಯನ್ನು ಅಪರಾಧೀಕರಣಗೊಳಿಸುವತ್ತಲೂ ಗಲ್ಫ್ ರಾಷ್ಟ್ರ ಬಯಸಿದೆ. ಕಾನೂನು ಸುಧಾರಣೆಗಳು ದೇಶದಲ್ಲಿ ಶಾಸನ ಹಾಗೂ ಹೂಡಿಕೆಯ ವಾತಾವರಣವನ್ನು ಸುಧಾರಿಸುವ ಪ್ರಯತ್ನಗಳ ಭಾಗವಾಗಿದೆ ಹಾಗೂ ಸಹಿಷ್ಣುತೆ ತತ್ವಗಳನ್ನು ಕ್ರೋಡೀಕರಿಸುವ ಪ್ರಯತ್ನವಾಗಿದೆ ಎಂದು ಸರಕಾರ ಹೇಳಿದೆ.
ಈ ಘೋಷಣೆಯು ಹದಗೆಟ್ಟಿದ್ದ ಯುಎಇ ಹಾಗೂ ಇಸ್ರೇಲ್ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಒಪ್ಪಂದವನ್ನು ಅನುಸರಿಸುತ್ತದೆ. ಇದು ಇಸ್ರೇಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ಹಾಗೂ ಹೂಡಿಕೆಯನ್ನು ತರುವ ನಿರೀಕ್ಷೆಯಿದೆ ಎಂದು ಮಾದ್ಯಮಗಳು ವರದಿ ಮಾಡಿದೆ.
ಮದ್ಯಕ್ಕೆ ಅವಕಾಶ: ಯುಎಇ ಘೋಷಿಸಿರುವ ಬದಲಾವಣೆಗಳಲ್ಲಿ 21 ಹಾಗೂ ಹೆಚ್ಚಿನ ವಯಸ್ಸಿನವರಿಗೆ ಮದ್ಯ ಸೇವನೆ, ಮಾರಾಟ ಹಾಗೂ ಶೇಖರಣೆ ವಿಧಿಸಲಾಗುತ್ತಿದ್ದ ದಂಡವನ್ನು ರದ್ದುಪಡಿಸುವುದು ಸೇರಿದೆ. ಕಾನೂನು ಸುಧಾರಣೆಗಳನ್ನು ರಾಜ್ಯ ಸ್ವಾಮ್ಯದ ಡಬ್ಲ್ಯುಎಎಂ ಸುದ್ದಿಸಂಸ್ಥೆ ಘೋಷಿಸಲಾಗಿದ್ದು, ರಾಜ್ಯ ಸಂಬಂಧಿತ ಪತ್ರಿಕೆ 'ದಿ ನ್ಯಾಶನಲ್' ನಲ್ಲಿ ಈ ಕುರಿತು ವಿವರಿಸಲಾಗಿದೆ.
ಈ ಹಿಂದೆ ವ್ಯಕ್ತಿಗಳು ತಮ್ಮ ಮನೆಗಳಲ್ಲಿ ಮದ್ಯವನ್ನು ಖರೀದಿಸಲು, ಸಾಗಿಸಲು ಹಾಗೂ ತನ್ನ ಬಳಿ ಇಟ್ಟುಕೊಳ್ಳಲು ಮದ್ಯದ ಪರವಾನಗಿಯ ಅಗತ್ಯವಿತ್ತು. ಮತ್ತೊಂದು ತಿದ್ದುಪಡಿಯು ಅವಿವಾಹಿತ ಜೋಡಿಗಳ ಸಹಜೀವನಕ್ಕೆ ಅವಕಾಶ ಮಾಡಿಕೊಡುತ್ತದೆ. ಇದು ಯುಎಇಯಲ್ಲಿ ಹಿಂದಿನಿಂದಲೂ ಅಪರಾಧವಾಗಿದೆ.







