ಮಂಗಳೂರು: ಅನಧಿಕೃತ ವಾಣಿಜ್ಯ ಮಳಿಗೆಗಳಿಗೆ ಮೇಯರ್ ತಂಡ ದಾಳಿ

ಮಂಗಳೂರು, ನ.8: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮ ಮೀರಿ ವಿಸ್ತರಣೆ ಮಾಡಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಮಳಿಗೆಗಳಿಗೆ ಮೇಯರ್ ದಿವಾಕರ ಪಾಂಡೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ರವಿವಾರ ದಾಳಿ ನಡೆಸಿದ್ದಾರೆ.
ಪರವಾನಗಿ ಪಡೆದ ಸ್ಥಳಕ್ಕಿಂತ ಹೆಚ್ಚುವರಿಯಾಗಿ ಪಾರ್ಕಿಂಗ್, ಫುಟ್‌ಪಾತ್ ಸ್ಥಳವನ್ನು ಅತಿಕ್ರಮಿಸಿ ಶೀಟ್ ಹಾಕಿ ತರಕಾರಿ, ಹಣ್ಣುಗಳನ್ನು ಶೇಖರಿಸಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮೇಯರ್ ದಾಳಿ ನಡೆಸಿದರು. ಈ ಸಂದರ್ಭ ಕೆಲವು ಮಳಿಗೆಗಳು ಪರವಾನಗಿ ನವೀಕರಣ ನಡೆಸದೆ ವ್ಯಾಪಾರ ನಡೆಸುತ್ತಿರುವುದು ಗಮನಕ್ಕೆ ಬಂದಿವೆ. ಇನ್ನು ಕೆಲವು ಅಂಗಡಿಗಳಲ್ಲಿ ಪರವಾನಗಿಯೇ ಇಲ್ಲದೆ ವ್ಯಾಪಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪರವಾನಗಿ ಪಡೆದ ಸ್ಥಳಕ್ಕಿಂತ ಹೆಚ್ಚವರಿಯಾಗಿ ಸೇರ್ಪಡೆಗೊಳಿಸಿರುವುದನ್ನು ತೆರವು ಮಾಡಬೇಕು. ಪರವಾನಗಿ ನವೀಕರಣ ಮಾಡದಿರುವ ವರು ತಕ್ಷಣ ಮಾಡಿಸಬೇಕು. ಪರವಾನಗಿ ಪಡೆಯದಿರುವ ಅಂಗಡಿಗಳನ್ನು ತೆರವು ಮಾಡಬೇಕು ಎಂದು ಮೇಯರ್ ಸೂಚಿಸಿದರು.
ನಗರದ ಹಂಪನಕಟ್ಟೆ, ಚಿಲಿಂಬಿ, ಮಾರ್ನಮಿಕಟ್ಟೆ, ಮಂಗಳಾದೇವಿ, ಫಳ್ನೀರ್, ಜೆಪ್ಪು ಮತ್ತಿತರ ಕಡೆ ನಡೆದ ದಾಳಿಯಲ್ಲಿ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಆರೋಗ್ಯಾಧಿಕಾರಿ ಮಂಜುನಾಥ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.










