ಮಲ್ಪೆಯ ದಾರಿದೀಪ ದುರಸ್ತಿಗೆ ಆಗ್ರಹಿಸಿ ಪಂಜಿನ ಮೆರವಣಿಗೆ

ಮಲ್ಪೆ, ನ.8: ಮಲ್ಪೆ ಸಿಟಿಜನ್ ಸರ್ಕಲ್‌ನಿಂದ ತೊಟ್ಟಂ ಚರ್ಚ್‌ವರೆಗೆ ದಾರಿದೀಪ ದುರಸ್ತಿ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಯುವಸೇನೆ ಮಲ್ಪೆ ನಗರ ಶಾಖೆ ಶನಿವಾರ ಸಂಜೆ ಪಂಜಿನ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿತು.
ಕಳೆದ ಒಂದು ವರ್ಷದಿಂದ ಮಲ್ಪೆ ಮೀನುಗಾರಿಕಾ ಬಂದರಿನಿಂದ ಪ್ರವಾಸಿ ತಾಣವಾದ ಮಲ್ಪೆಬೀಚ್ ಮತ್ತು ತೊಟ್ಟಂ ಚರ್ಚ್‌ವರೆಗೆ ದಾರಿದೀಪ ಇಲ್ಲದೆ ಜನ ಪರದಾಡುತ್ತಿರುವುದನ್ನು ಹಾಗೂ ಎರಡೂ ದಲಿತ ಕಾಲನಿಯಲ್ಲಿ ದಾರಿದೀಪದ ಅವ್ಯವಸ್ಥೆಯನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ, ಸೌಕರ್ಯ ಭರಿತ, ಸ್ವಚ್ಚ, ಸುಂದರ ಉಡುಪಿ ನಿರ್ಮಾಣ ಧ್ಯೇಯದೊಂದಿಗೆ ಆಡಳಿತಕ್ಕೆ ಬಂದ ಜನಪ್ರತಿನಿಧಿಗಳು ಫ್ಯಾಶನ್ ಶೋ ನಡೆಸುದನ್ನು ಬಿಟ್ಟು ವಾರ್ಡಿನ ಕೆಲಸ ಮಾಡಬೇಕು. ದಕ್ಷತೆ, ಶಿಸ್ತು ಅಳವಡಿಸಿ ಭ್ರಷ್ಟಾಚಾರ ರಹಿತ ಜನಪರವಾದ ಕೆಲಸಮಾಡಲು ಅಸಾಧ್ಯ ವಾದಲ್ಲಿ ಕುರ್ಚಿ ಬಿಟ್ಟು ತೊಳಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ನಾಯಕ ಗಣೇಶ್ ನೆರ್ಗಿ ಮಾತನಾಡಿ, ದಾರಿದೀಪದ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇವರಿಗೆ ದಲಿತರ ನೋವು ಅರ್ಥವಾಗುತ್ತಿಲ್ಲ. ತಕ್ಷಣ ಈ ದಾರಿದೀಪದ ಸಮಸ್ಯೆ ಸರಿಪಡಿಸದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ಸುಂದರ ಕಪ್ಪೆಟ್ಟು, ಹರೀಶ್ ಸಾಲ್ಯಾನ್, ರಮೇಶ್ ಪಾಲ್, ಕೃಷ್ಣ ಶ್ರೀಯಾನ್, ಪ್ರಸಾದ್ ನೆರ್ಗಿ, ಭಗವಾನ್, ಗುಣವಂತ ತೊಟ್ಟಂ, ಸುರೇಶ್ ಪಾಲನ್, ಪ್ರಶಾಂತ್ ನೆರ್ಗಿ, ಕೃಷ್ಣ ಅಮೀನ್, ಶಶಿಕಲಾ ತೊಟ್ಟಂ, ಪೂರ್ಣಿಮಾ ನೆರ್ಗಿ, ಶಂಕರ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.







