ಬಡಗಬೆಟ್ಟು ಸೊಸೈಟಿಯಿಂದ ಶೇ.15 ಡಿವಿಡೆಂಟ್ ಘೋಷಣೆ

ಉಡುಪಿ, ನ.8: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 16520 ಸದಸ್ಯರಿಂದ 4.21ಕೋಟಿ ರೂ. ಪಾಲು ಬಂಡವಾಳ ಮತ್ತು 331.68ಕೋಟಿ ಠೇವಣಿ ಸಂಗ್ರಹಿಸಿದ್ದು, 271.25 ಕೋಟಿ ರೂ. ಹೊರ ಬಾಕಿ ಸಾಲ ಹೊಂದಿದೆ. 7.25ಕೋಟಿ ರೂ. ನಿವ್ವಳ ಲಾಭ ಗಳಿಸಿರುವ ಸಂಘವು ಸದಸ್ಯರಿಗೆ ಶೇ.15 ಡಿವಿಡೆಂಟ್ ಘೋಷಿಸಿದೆ.
ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಅಧ್ಯಕ್ಷತೆಯಲ್ಲಿ ಇಂದು ಉಡುಪಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿದ ಸೊಸೈಟಿಯ 2019-20ನೆ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಘೋಷಣೆ ಮಾಡ ಲಾಯಿತು. ಸಂಘದ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು.
ಕೊರೋನ ಸಂಕಷ್ಟದ ಸಮಯದಲ್ಲಿಯೂ ಸಂಘ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಕಲ್ಪಿಸಿದೆ. ಸಂಘದ ಎಲ್ಲ ಶಾಖೆಗಳಲ್ಲಿ ಸೇಫ್ ಲಾಕರ್, ಇ ಸ್ಟಾಂಪಿಂಗ್, ಪಾನ್‌ಕಾರ್ಡ್, ನೆಫ್ಟ್, ಆರ್‌ಟಿಜಿಎಸ್ ಸೇವೆ, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್ ಸೇರಿದಂತೆ ವಿವಿಧ ಯೋಜನೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಉಳಿತಾಯ ಖಾತೆಯ ಬ್ಯಾಲೆನ್ಸ್ ತಿಳಿಯಲು ಮಿಸ್ಡ್‌ಕಾಲ್ ಸರ್ವಿಸ್, ಎಸ್‌ಎಂಎಸ್ ಸೌಲಭ್ಯ ಆಳವಡಿಸಲಾಗಿದೆ. ಪ್ರಸ್ತುತ ತನ್ನ ಕಾರ್ಯ ವ್ಯಾಪ್ತಿಯಲ್ಲಿ 10 ಶಾಖೆಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪೂರ್ಣಿಮಾ ಜನಾರ್ದನ್ ಕೊಡವೂರು ಹಾಗೂ ತನುಶ್ರೀ ಪಿತ್ರೋಡಿ ಅವರನ್ನು ಗೌರವಿಸ ಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಶೆಟ್ಟಿ, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಸಂತ ಕೆ.ಕಾಮತ್, ವಿನಯ ಕುಮಾರ್ ಟಿ.ಎ., ಜಯಾನಂದ ಸಿ.ಮೈಂದನ್, ಪದ್ಮನಾಭ ಕೆ.ನಾಯಕ್, ರಘುರಾಮ ಎಸ್.ಶೆಟ್ಟಿ, ಜಾರ್ಜ್ ಸಾಮ್ಯುವೆಲ್, ಸದಾಶಿವ ನಾಯ್ಕಿ, ಜಯ ಶೆಟ್ಟಿ, ಗಾಯತ್ರಿ ಎಸ್.ಭಟ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್ ವಂದಿಸಿದರು.







