ಕೊಡೇರಿ ಬಂದರಿನಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಜಿಲ್ಲಾಧಿಕಾರಿ ಆದೇಶ
ಉಡುಪಿ, ನ.8: ಬೈಂದೂರು ತಾಲೂಕಿನ ಕೊಡೇರಿ ಮೀನುಗಾರಿಕಾ ಬಂದರಿನಲ್ಲಿ ಮುಂದಿನ ಆದೇಶ ಬರುವವರೆಗೆ ಮೀನುಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ನೂತನವಾಗಿ ನಿರ್ಮಾಣಗೊಂಡ ಕೊಡೇರಿ ಬಂದರಿನಲ್ಲಿ ಕಳೆದ ಎರಡು ದಿನಗಳಿಂದ ಸ್ಥಳೀಯ ಮೀನುಗಾರರು ಹಾಗೂ ಉಪ್ಪುಂದದ ಮೀನು ಗಾರರ ನಡುವೆ ಮೀನು ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಜಟಾಪಟಿ ನಡೆದಿತ್ತು. ಶನಿವಾರ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮೀನು ಖಾಲಿ ಮಾಡಲು ಬಿಡದೆ ನದಿಯಲ್ಲಿ ದೋಣಿಯನ್ನು ಅಡ್ಡಗಟ್ಟಿದ ಕೊಡೇರಿ ಮೀನುಗಾರರ ಮೇಲೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿ ಚದುರಿಸಿದ್ದರು.
ಇದರಿಂದ ಪರಿಸರದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕೊಡೇರಿ, ಉಪ್ಪುಂದ, ಮರವಂತೆ, ಬೈಂದೂರು, ಹಾಗೂ ಕಿರಿಮಂಜೇಶ್ವರ ಭಾಗದ ಮೀನುಗಾರರು ಯಾವುದೇ ಕಾರಣಕ್ಕೂ ಮೀನು ಹೊತ್ತು ಕೊಡೇರಿ ಬಂದರಿಗೆ ಬರಬಾರದು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾಡಳಿತದಿಂದ ಹೊರಡಿಸಲಾಗಿದೆ.
ಈ ಭಾಗದ ಮೀನುಗಾರರನ್ನು ಪ್ರತ್ಯೇಕವಾಗಿ ಕರೆಸಿ ಸಭೆ ನಡೆಸಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿ ಕಾರಿ ಮಾಹಿತಿ ನೀಡಿದ್ದಾರೆ.
ವಿವಾದ: ಉಪ್ಪುಂದ ಭಾಗದ 100ಕ್ಕೂ ಅಧಿಕ ದೋಣಿಗಳು ಮೀನುಗಾರಿಕೆ ನಡೆಸಿ ಶನಿವಾರ ಅಪರಾಹ್ನ ಎಡಮಾವಿನಹೊಳೆ ಮೂಲಕ ಕೊಡೇರಿ ಕಿರುಬಂದರಿಗೆ ಮೀನು ಮಾರಾಟ ಮಾಡಲು ಬಂದಾಗ ವಿವಾದ ಉಂಟಾಗಿತ್ತು. ಕೊಡೇರಿ ಭಾಗದ ಮೀನುಗಾರರು ಇದಕ್ಕೆ ಅವಕಾಶ ನೀಡದೆ ಪ್ರತಿಭಟಿಸಿದ್ದರು.
ಬಂದರಿನಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ, ಎಡಮಾವಿನ ಹೊಳೆಗೆ ಸೇತುವೆ ನಿರ್ಮಾಣ ಮಾಡುವವರಿಗೆ ಬಂದರು ಪ್ರಾಂಗಣದಲ್ಲಿ ಮೀನು ಹರಾಜಿಗೆ ಅವಕಾಶ ನೀಡುವುದಿಲ್ಲ ಎಂಬುದು ಅವರ ವಾದವಾಗಿತ್ತು. ಅವರು ಉಪ್ಪುಂದ ಭಾಗದ ದೋಣಿಗಳು ಮುಂದೆ ಸಂಚರಿಸದಂತೆ ತಮ್ಮ ದೋಣಿಗಳನ್ನು ಅಡ್ಡಗಟ್ಟಿದ್ದರು.
ಸ್ಥಳಕ್ಕೆ ಆಗಮಿಸಿದ ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಹಾಗೂ ತಹಶೀಲ್ದಾರ್‌ರು ಮೀನುಗಾರರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರೂ ಫಲ ನೀಡಲ್ಲಿಲ್ಲ. ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಉದ್ವಿಗ್ನ ಸ್ಥಿತಿ ತಲೆದೋರಿದಾಗ ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಠಿಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದರು.







