ಅಂಗಡಿ ಎದುರು ಮೂತ್ರ ಮಾಡಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಹೊಸದಿಲ್ಲಿ, ನ.9: ದಿನಸಿ ಅಂಗಡಿಯ ಎದುರು ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ್ದಕ್ಕೆ ಆರಂಭವಾದ ಮಾತಿನ ಚಕಮಕಿ ಬಳಿಕ ಗುಂಪು ಘರ್ಷಣೆಗೆ ತಿರುಗಿ ಓರ್ವನ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಆಗ್ನೇಯ ದಿಲ್ಲಿಯಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಿ-ಬ್ಲಾಕ್ ಮಾರುಕಟ್ಟೆಯ ಅಂಗಡಿಯೊಂದರ ಎದುರು ಜಗಜೀತ್ ಸಿಂಗ್ ಎಂಬಾತ ಮೂತ್ರವಿಸರ್ಜಿಸಿದ್ದು ಇದನ್ನು ಅಂಗಡಿಯ ಮಾಲಕರಾದ ವಿನಯ್ ಮತ್ತು ವಿಮಲ್ ಆಕ್ಷೇಪಿಸಿದ್ದರು. ಅಲ್ಲಿಂದ ತೆರಳಿದ್ದ ಜಗಜೀತ್, ಬಳಿಕ 7 ಮಿತ್ರರೊಂದಿಗೆ ವಾಪಸು ಬಂದು ವಿನಯ್ ಮತ್ತು ವಿಮಲ್ ಜೊತೆ ವಾಗ್ಯುದ್ದ ನಡೆಸಿ ಹಲ್ಲೆಗೆ ಮುಂದಾಗಿದ್ದಾರೆ. ಆಗ ಸ್ಥಳೀಯರು ಒಟ್ಟು ಸೇರಿ ಜಗಜೀತ್‌ನನ್ನು ಹಿಡಿದಿದ್ದು ಉಳಿದವರು ಅಲ್ಲಿಂದ ಓಡಿ ಹೋಗಿದ್ದಾರೆ. ಆದರೆ ಅಮನ್‌ದೀಪ್ ಎಂಬಾತ ಸ್ವಲ್ಪ ದೂರದಲ್ಲೇ ಕುಸಿದು ಬಿದ್ದಿದ್ದು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತನಾಗಿದ್ದಾನೆ . ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತನ ಬೆನ್ನಿನ ಭಾಗದಲ್ಲಿ ಹರಿತವಾದ ಆಯುಧದಿಂದ ಆದ ಗಾಯವಿತ್ತು. ಪ್ರಕರಣಕ್ಕೆ ಸಂಬಂಧಿಸಿ ವಿನಯ್ ಮತ್ತು ವಿಮಲ್‌ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.





