ವಿಜಯೋತ್ಸವ ಭಾಷಣದಲ್ಲಿ ಭಾರತ ಮೂಲದ ತಾಯಿಯನ್ನು ಸ್ಮರಿಸಿದ ಕಮಲಾ ಹ್ಯಾರಿಸ್ ಹೇಳಿದ್ದು ಹೀಗೆ…

ವಾಶಿಂಗ್ಟನ್,ನ.8: ಅಮೆರಿಕದ ಪ್ರಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಳಿಕ ಕಮಲಾ ಹ್ಯಾರಿಸ್ ಮಾಡಿದ ಚೊಚ್ಚಲ ಭಾಷಣದಲ್ಲಿ ಭಾರತೀಯ ಮೂಲದ ತನ್ನ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದರು.
‘‘ ಇಂದು ಇಲ್ಲಿ ನನ್ನ ಉಪಸ್ಥಿತಿಗೆ ಅತ್ಯಂತ ಜವಾಬ್ದಾರಿಯುತವಾಗಿ ಕಾರಣಕರ್ತರಾಗಿರುವ ನನ್ನ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. 19 ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಹುಶಃ ಇಂತಹದ್ದೊಂದು ಕ್ಷಣವನ್ನು ಕಲ್ಪಿಸಲು ಆಕೆೆಗೆ ಸಾಧ್ಯವೇ ಇರಲಿಲ್ಲ. ಆದರೆ ಅಮೆರಿಕದಲ್ಲಿ ಇಂತಹದ್ದೊಂದು ಕ್ಷಣವು ಸಂಭವಿಸುವುದು ಸಾಧ್ಯವೆಂಬ ಗಾಢ ನಂಬಿಕೆಯನ್ನು ಅವಳು ಹೊಂದಿದ್ದಳು’’ ಎಂದು ಹೇಳಿದರು. ಉತ್ತಮ ಭವಿಷ್ಯವನ್ನು ನಿರ್ಮಿಸುವ ಶಕ್ತಿ ಹೊಂದಿರುವ ಜನರು ನಾವಾಗಿದ್ದೇವೆ ಎಂದು ಕಮಲಾ ಹ್ಯಾರಿಸ್ ಹೇಳಿದರು.
‘‘ ನನ್ನ ತಾಯಿ ಹಾಗೂ ತಲೆಮಾರುಗಳು ಮಹಿಳೆಯರು, ಕಪ್ಪುಜನಾಂಗೀಯ ಮಹಿಳೆಯರು, ಏಶ್ಯನ್, ಬಿಳಿ ಜನಾಂಗೀಯ, ಲ್ಯಾಟಿನ್, ಮೂಲನಿವಾಸಿ ಅಮೆರಿಕನ್ ಮಹಿಳೆಯರು ಅಮೆರಿಕದ ಇತಿಹಾಸದಲ್ಲಿ ಇಂತಹದ್ದೊಂದು ಕ್ಷಣವು ಸಾಧ್ಯವಾಗುವುದಕ್ಕೆ ದಾರಿ ಮಾಡಿಕೊಟ್ಟಿದ್ದ್ಜಾರೆ’’ ಎಂದು ಕಮಲಾ ಹ್ಯಾರಿಸ್ ಬೆಂಬಲಿಗರ ಹರ್ಷೋದ್ಘಾರದ ನಡುವೆ ಹೇಳಿದರು.
ಆಕಾಂಕ್ಷೆಯೊಂದಿಗೆ ಕನಸು ಕಾಣಿರಿ, ಪ್ರಾಮಾಣಿಕತೆಯೊಂದಿಗೆ ಮುನ್ನಡೆಯಿರಿ ಎಂದವರು ಈ ಸಂದರ್ಭದಲ್ಲಿ ಮಕ್ಕಳಿಗೆ ಕರೆ ನೀಡಿದರು. ಬೈಡನ್ ಭಾಷಣದ ಬಳಿಕ ಅವರು ತನ್ನ ಇಬ್ಬರು ಶ್ವೇತವಸ್ತ್ರಧಾರಿಗಳಾದ ಸೋದರ ಮೊಮ್ಮಕ್ಕಳ ಜೊತೆ ವೇದಿಕೆಯನ್ನು ಹಂಚಿಕೊಂಡರು.
57 ವರ್ಷ ವಯಸ್ಸಿನ ಕಮಲಾ ಹ್ಯಾರಿಸ್ ಅವರು ಭಾರತೀಯ ವಲಸಿಗ ಮಹಿಳೆ ಶ್ಯಾಮಲಾ ಗೋಪಾಲನ್ ಹಾಗೂ ಜಮೈಕಾ ಸಂಜಾತ ಡೊನಾಲ್ಡ್ ಹ್ಯಾರಿಸ್ ಅವರ ಪುತ್ರಿ.
ಅಮೆರಿಕದ ಉಪಾಧ್ಯಕ್ಷೆಯಾಗುವ ಮೂಲಕ ಅದ್ವಿತೀಯ ಯಶಸ್ಸನ್ನು ಕಂಡ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಟ್ವಿಟ್ಟರ್‌ನಲ್ಲಿ ಅಭಿನಂದಿಸಿದ್ದಾರೆ. ‘‘ ಇದು ಕೇವಲ ನಿಮ್ಮ ‘ಚಿತ್ತಿ’(ಚಿಕ್ಕಮ್ಮ)ಯಂದಿರಿಗೆ ಮಾತ್ರವಲ್ಲ ಎಲ್ಲಾ ಭಾರತೀಯ ಅಮೆರಿಕನ್ನರಿಗೂ ಹೆಮ್ಮೆಯ ಕ್ಷಣವಾಗಿದೆ’’ ಎಂದವರು ಟ್ವಿಟೀಸಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಡೆಮಾಕ್ರಾಟಿಕ್ ಪಕ್ಷದ ಪ್ರಭಾವಿ ರಾಜಕಾರಣಿಯಾಗಿ ಬೆಳೆದಿರುವ ಕಮಲಾ ಹ್ಯಾರಿಸ್ ಸ್ಯಾನ್‌ಫ್ರಾನ್ಸಿಸ್ಕೊದ ಜಿಲ್ಲಾ ಆಟಾರ್ನಿ ಹಾಗೂ ಕ್ಯಾಲಿಫೋರ್ನಿಯಾದ ಆಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಆನಂತರ ಅವರು ಅಮೆರಿಕದ ಸೆನೆಟ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2020ರ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅವರು ಬೈಡೆನ್ ಎದುರು ಸೋಲುಂಡಿದ್ದರು. ಆದಾಗ್ಯೂ ಅಧ್ಯಕ್ಷೀಯ ಚುನಾವಣೆಗೆ ಬೈಡೆನ್ ಅವರು ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ 2021ರ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
While I may be the first, I won’t be the last. pic.twitter.com/R5CousWtdx
— Kamala Harris (@KamalaHarris) November 8, 2020







