ಕೊಡೇರಿಯಲ್ಲಿ ಮೀನು ಹರಾಜು ಪ್ರಕ್ರಿಯೆ ವಿವಾದ, ಮೀನುಗಾರರ ಮಧ್ಯೆ ಘರ್ಷಣೆ
14 ಮಂದಿಯ ಬಂಧನ

ಬೈಂದೂರು, ನ.8: ಮೀನು ಹರಾಜು ಪ್ರಕ್ರಿಯೆ ವಿಚಾರವಾಗಿ ಕೊಡೇರಿ ಕಿರು ಬಂದರಿನಲ್ಲಿ ನ.7ರಂದು ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ನಡುವೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಬೈಂದೂರು ಪೊಲೀಸರು ಒಟ್ಟು 14 ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರು ಮೀನುಗಾರಿಕೆ ಇಲಾಖೆ ನಿರ್ದೇಶಕರು ಕೊಡೇರಿ ವ್ಯಾಪ್ತಿಯಲ್ಲಿ ಮೀನುಗಾರಿಕೆ ಹರಾಜು/ಮಾರಾಟದ ಕುರಿತು ಆದೇಶ ನೀಡಿದ್ದು, ಅದರಂತೆ ನ.7ರಂದು ಉಪ್ಪುಂದ ಗ್ರಾಮದ ಕೊಡೇರಿ ವ್ಯಾಪ್ತಿಯ ಮೀನುಗಾರರು ಮೀನು ಗಾರಿಕೆಗಾಗಿ ಸಮುದ್ರಕ್ಕೆ ಹೋಗಿ ಮೀನು ಹಿಡಿದು ವಾಪಾಸ್ಸು ಮೀನು ಖಾಲಿ ಮಾಡಲು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣಕ್ಕೆ ಬರುತ್ತಿದ್ದರು.
ಆಗ ಉಪ್ಪುಂದ ಭಾಗದ ಮೀನುಗಾರರು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣಕ್ಕೆ ಬಾರದಂತೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ವ್ಯಾಪ್ತಿಯ ಕೆಲವು ವ್ಯಕ್ತಿಗಳು ಸುಮಾರು 8-10 ದೋಣಿಗಳನ್ನು ಅಡ್ಡ ಇಟ್ಟು ಮೀನು ವ್ಯಾಪಾರಕ್ಕೆ ತೊಂದರೆ ಮಾಡಿದ್ದಾರೆಂದು ದೂರಲಾಗಿದೆ. ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ, ಕಿರಿಮಂಜೇಶ್ವರ ಕೊಡೇರಿ ಭಾಗದ ನಾಡಾ ದೋಣಿ ಮೀನು ಗಾರಿಕಾ ಸಂಘದ ಕೆಲವೊಂದು ಮುಖಂಡರೊಂದಿಗೆ ಚರ್ಚಿಸಿ, ತಡೆಹಿಡಿದಿರುವ ದೋಣೆಗಳನ್ನು ಬಿಡುವಂತೆ ಮನವಿ ಮಾಡಿದ್ದರೆನ್ನಲಾಗಿದೆ.
ಆದರೆ ಅದನ್ನು ಲೆಕ್ಕಿಸದ ಮೀನುಗಾರರು ಪ್ರತಿಭಟನೆಯನ್ನು ಮುಂದುವರಿಸಿ, ಸುಮಾರು 100ರಿಂದ 200 ಜನರು ಅಕ್ರಮ ಕೂಟ ಸೇರಿ ಕೊಂಡು ಅನಾವಶ್ಯಕ ವಾಗಿ ಸರಕಾರಿ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದ್ದರು. ನಂತರ ಎರಡೂ ಸಂಘಟನೆಗಳ ಮಧ್ಯೆ ಮಾರಾಮಾರಿ ಆಗುವ ಸಾಧ್ಯತೆ ಇರುವುದನ್ನು ಮನ ಗಂಡ ಪೊಲೀಸರು, ದೋಣಿಗಳನ್ನು ತಡೆದಿರುವ ಪ್ರತಿಭಟನಗಾರರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದರು.
ಆದರೆ ಇದಕ್ಕೆ ಸ್ಪಂದಿಸದ ಪ್ರತಿಭಟನಾಕಾರರು, ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಚಪ್ಪಲಿ ಹಾಗೂ ವಾಟರ್ ಬಾಟಲ್ಗಳನ್ನು ತೂರಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದರೆಂದು ದೂರಲಾಗಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಈ ಬಗ್ಗೆ ಬೈಂದೂರು ತಹಶೀಲ್ದಾರ್ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 143, 147, 148, 353, 504, 506 ಜೊತೆಗೆ 149ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಘರ್ಷಣೆಗೆ ಸಂಬಂಧಿಸಿ ಕೊಡೇರಿ ಭಾಗದ ಸುಮಾರು 14 ಮಂದಿ ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋ ಬಸ್ತ್ ಮುಂದುವರೆಸಲಾಗಿದೆ.








