ಜಗನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಅನುಮತಿ ನಿರಾಕರಣೆ

ಹೊಸದಿಲ್ಲಿ, ನ. 7: ನ್ಯಾಯಮೂರ್ತಿಗಳ ಮೇಲೆ ಆರೋಪ ಮಾಡಿರುವುದಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹಾಗೂ ಅವರ ಪ್ರಧಾನ ಸಲಹೆಗಾರರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ದಾಖಲಿಸಲು ನಿರಾಕರಿಸಿದ ನವೆಂಬರ್ 2ರ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಮನವಿಯನ್ನು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿರಸ್ಕರಿಸಿದ್ದಾರೆ.
ಉಪಾಧ್ಯಾಯ ಅವರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿರುವ ಕೆ.ಕೆ. ವೇಣುಗೋಪಾಲ್, ನ್ಯಾಯಾಂಗ ನಿಂದನೆ ಸಮಸ್ಯೆ ಇರುವುದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ, ಅವರ ಪ್ರಧಾನ ಸಲಹೆಗಾರ ಅಜೇಯ ಕಲ್ಲಂ ಅವರ ನಡುವೆ ಎಂದು ತನ್ನ ನಿಲುವನ್ನು ಮರು ಉಚ್ಚರಿಸಿದ್ದಾರೆ.
ನ್ಯಾಯಮೂರ್ತಿ ಅವರ ಮೇಲೆ ಆರೋಪ ಮಾಡಿದ ಕುರಿತು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಉಪಾಧ್ಯಾಯ ಅವರು ನವೆಂಬರ್ 2ರಂದು ಮನವಿ ಸಲ್ಲಿಸಿದ್ದರು. ಆದರೆ, ಆ ಮನವಿಗೆ ಅನುಮತಿ ನೀಡಲು ಕೆ.ಕೆ. ವೇಣುಗೋಪಾಲ್ ಅವರು ನಿರಾಕರಿಸಿದ್ದರು. ಆದರೆ, ತಾನು ಅನುಮತಿ ನೀಡದೇ ಇರುವುದರಿಂದ ಉಪಾಧ್ಯಾಯ ಅವರು ನ್ಯಾಯಾಲಯಕ್ಕೆ ಹೋಗುವುದು ನಿಲ್ಲುವುದಿಲ್ಲ. ಅವರು ಮುಖ್ಯಮಂತ್ರಿ ಜನಗನ್ ಮೋಹನ್ ರೆಡ್ಡಿ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರು. ಅಕ್ಟೋಬರ್ 6ರಂದು ಜಗನ್ ಮೋಹನ್ ರೆಡ್ಡಿ ಮುಖ್ಯ ನ್ಯಾಯಮೂರ್ತಿ ಅ ಎಸ್.ಎ. ಬೋಬ್ಡೆ ಅವರಿಗೆ ಪತ್ರ ಬರೆದು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಬಗ್ಗೆ ಆರೋಪಿಸಿದ್ದರು.







