ಉಡುಪಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ, ಬಿಸಿಯೂಟ ನೌಕರರಿಂದ ಧರಣಿ

ಉಡುಪಿ, ನ.9: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ ಹಾಗೂ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ, ಅಂಗನವಾಡಿ ನೌಕರ ರಿಗೆ 21ಸಾವಿರ ರೂ. ಕನಿಷ್ಠ ವೇತನ ಹೆಚ್ಚಿಸಿ, ಖಾಯಂ ಮಾಡಿ 10ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. 2020 ನೂತನ ಶಿಕ್ಷಣ ನೀತಿ ಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು. ಅಂಗನ ವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸ ಬೇಕು. ಐಸಿಡಿಎಸ್‌ಗೆ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಈಗಾಗಲೇ ನಿವೃತ್ತಿಯಾದವರಿಗೆ ನಿವೃತ್ತಿ ವೇತನ ಬಿಡುಗಡೆ ಮಾಡಬೇಕು. ಎಲ್ಲರಿಗೂ ಪಿಂಚಣಿ ಒದಗಿಸಿ, ಎನ್‌ಪಿಎಸ್‌ನ್ನು ರದ್ದು ಮಾಡಿ ಹಿಂದಿನ ಪಿಂಚಣಿ ಯೋಜನೆಯನ್ನು ಪುನರ್‌ಸ್ಥಾಪಿಸಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಮಾಡಬೇಕು ಎಂದರು.
ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಯಶ್ರೀ ಮಾತನಾಡಿ, ನೂತನ ಶಿಕ್ಷಣ ನೀತಿ 2020ನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆ ಯನ್ನು ಬಲಿಷ್ಠ ಪಡಿಸಿ, ಈಗ ಇರುವ ಮಾದರಿಯನ್ನು ಮುಂದು ವರೆಸಬೇಕು. ಕೇಂದ್ರೀಕೃತ ಅಡುಗೆ ಮಾದರಿ ಮಾಡಬಾರದು. ಕೆಲಸದ ಅವಧಿಯನ್ನು 4 ಗಂಟೆಯಿಂದ 6ಗಂಟೆಗೆ ಅಕ್ಷರದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದರು.
ಶಾಲೆಗಳಲ್ಲಿ ಗ್ರೂಪ್ ಡಿ ನೌಕರರು ಇಲ್ಲದಿರುವುದರಿಂದ ಅಕ್ಷರದಾಸೋಹ ನೌಕರರನ್ನು ಶಾಲಾ ಸಿಬ್ಬಂದಿಗಳೆಂದು ನೇಮಕಾತಿ ಆದೇಶ ನೀಡಬೇಕು. ಬಿಸಿ ಯೂಟ ಮಹಿಳೆಯರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿ ಚಾರಣೆ ನಡೆಸಬೇಕು. ನಿವೃತ್ತಿ ವೇತನ ಹಾಗೂ ಆರೋಗ್ಯ ಸೌಲಭ್ಯ ಒದಗಿಸ ಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕವಿರಾಜ್, ನಳಿನಿ, ವೆಂಕಟೇಶ್ ಕೋಣಿ, ಉಮೇಶ್ ಕುಂದರ್, ದಾಸು ಭಂಡಾರಿ, ಕಮಲ, ಬೇಬಿ ಭಂಡಾರಿ, ಅಂಬಿಕಾ, ಜಯಲಕ್ಷ್ಮೀ, ಸುನೀತಾ ಶೆಟ್ಟಿ, ಯಶೋಧಾ ಮೊದಲಾದವರು ಉಪಸ್ಥಿತರಿದ್ದರು.









