ಪಿಂಚಣಿ ನೀಡುವಂತೆ ಒತ್ತಾಯಿಸಿ ನಿವೃತ್ತ ಸಾರಿಗೆ ನೌಕರರ ಧರಣಿ
ಬೆಂಗಳೂರು, ನ.9: ಪಿಂಚಣಿ ಹಣ ನೀಡುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಸಾರಿಗೆ ಮತ್ತು ಕರ್ನಾಟಕ ರಾಜ್ಯ ಸಾರಿಗೆಯ 200ಕ್ಕೂ ಹೆಚ್ಚು ನಿವೃತ್ತ ನೌಕರರು ಸೋಮವಾರ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
30 ವರ್ಷಗಳ ಕಾಲ ಕೆಲಸ ಮಾಡಿದರು ಸರಿಯಾದ ಪಿಂಚಣಿ ಇಲ್ಲ. ಸುಮಾರು 30 ವರ್ಷ ಕೆಲಸ ಮಾಡಿದರೂ ಮಾಸಿಕ 2075 ರೂ ಪಿಂಚಣಿ ಬರುತ್ತಿದೆ. ಈ ಹಣದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ.
ಕೊರೋನ ಸಂದರ್ಭದಲ್ಲಿ ಇಷ್ಟು ಪಿಂಚಣಿ ಹಣದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ನಾವೆಲ್ಲ ವಯೋವೃದ್ಧರಾಗಿದ್ದು ಮಾಸಿಕ 1 ಸಾವಿರ ರೂ. ದಿಂದ 3 ಸಾವಿರ ರೂ. ನಿವೃತ್ತಿ ವೇತನ ಪಡೆಯುತ್ತಿದ್ದೇವೆ. ಇದೇ ರೀತಿ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ನಿವೃತ್ತ ನೌಕರ ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ ಮಾತನಾಡಿ, ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಿಂಚಣಿ ಸಿಗಬೇಕು. ಸರ್ವೋಚ್ಚ ನ್ಯಾಯಾಲಯ ನಾಲ್ಕು ವರ್ಷದ ಕೆಳಗೆ ನಿವೃತ್ತ ನೌಕರರಿಗೆ ನ್ಯಾಯಯುತ ಪಿಂಚಣಿ ದೊರೆಯಬೇಕು ಎಂದು ಆದೇಶ ನೀಡಿದೆ.
ಆದರೆ ಭವಿಷ್ಯ ನಿಧಿ ಪ್ರಾಧಿಕಾರವು ನಿರ್ಲಕ್ಷ್ಯ ವಹಿಸುತ್ತಿದ್ದು, ನಾನು 37 ವರ್ಷ ಸೇವೆ ಸಲ್ಲಿಸಿ 2,087 ರೂ ಪಿಂಚಣಿ ಪಡೆಯುತ್ತಿದ್ದೇನೆ. ನಮಗೆ ಯಾವುದೇ ವಿಮಾ ಸೌಲಭ್ಯವಿಲ್ಲ. ಗೌರವಯುತವಾಗಿ ಬದುಕಬೇಕಾದರೆ ಪಿಂಚಣಿ ಹೆಚ್ಚಿಸಲೇಬೇಕೆಂದು ಮನವಿ ಮಾಡಿದರು.







