ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ನ.9: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಸೋಮವಾರ ಬಜ್ಪೆ ಕೆಂಜಾರಿನಲ್ಲಿರುವ ವಿಮಾನ ನಿಲ್ದಾಣ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಜಿಲ್ಲೆಗೆ ವಿವಿಧ ಯೋಜನೆಗಳನ್ನು ತರಲಾಯಿತು. ಅದಕ್ಕೆ ಪೂರಕವಾಗಿ ಯು.ಎಸ್.ಮಲ್ಯ ಮಂಗಳೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇಂದು ಕೇಂದ್ರದ ಮೋದಿ ಸರಕಾರ ಮಂಗಳೂರು ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳನ್ನು ಖಾಸಗೀರಕಣ ಮಾಡುವ ಮೂಲಕ ಅದಾನಿ ಸಂಸ್ಥೆಗೆ ಮಾರಾಟ ಮಾಡಿದೆ. ಚುನಾವಣೆಯಲ್ಲಿ ತಾನು ನೀಡಿದ ಯಾವೊಂದು ಭರವಸೆಯನ್ನೂ ಈಡೇರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ, ಐವನ್ ಡಿಸೋಜ ಮಾತನಾಡಿ ಮೋದಿ ಅಧಿಕಾರಕ್ಕೆ ಬಂದ ನಂತರ ಅಂಬಾನಿ ಮತ್ತು ಅದಾನಿಯ ಬಗ್ಗೆ ಸಾಕಷ್ಟು ಒಲವು ತೋರಿರುವುದು ಗುಟ್ಟಾಗಿ ಉಳಿದಿಲ್ಲ. ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿ ಅದಾನಿಗೆ ನೀಡಿದ್ದರ ಮರ್ಮವೇನು? ಎಂದು ಪ್ರಶ್ನಿಸಿದರಲ್ಲದೆ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿದ ನಂತರ ಸಂಸತ್ತಿನಲ್ಲಿ ಮುಂದುವರಿಯಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ. ಸ್ಥಳೀಯ ಬಿಜೆಪಿ ನಾಯಕರು ಕೂಡಾ ಈ ಬಗ್ಗೆ ಮಾತನಾಡದಿರುವುದು ವಿಪರ್ಯಾಸ ಎಂದರು.
ಬಿಜೆಪಿ ಸರಕಾರಕ್ಕೆ ಜಿಲ್ಲೆಯ ಅಭಿವೃದ್ಧಿ ಕುರಿತು ಆಸಕ್ತಿ ಇಲ್ಲ. ಬದಲಾಗಿ ಕಾಂಗ್ರೆಸ್ ಸರಕಾರದ ಕೊಡುಗೆಗಳನ್ನು ಬ್ಯಾಂಕ್‌ಗಳ ವಿಲೀನ, ವಿಮಾನ ನಿಲ್ದಾಣಗಳ ಖಾಸಗೀಕರಣದ ಮೂಲಕ ಹಾಳುಗೆಡವುತ್ತಿದೆ. ಈಗಾಗಲೇ ಖಾಸಗೀಕರಣವಾಗಿರುವ ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ ಮತ್ತಿತರರು ಪಾಲ್ಗೊಂಡಿದ್ದರು









