ವಿದ್ಯುತ್ ದರ ಏರಿಕೆ ನಿರ್ಧಾರ ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ: ಡಿ.ಕೆ.ಶಿವಕುಮಾರ್ ಎಚ್ಚರಿಕೆ

ಬೆಂಗಳೂರು, ನ.9: `ಕೊರೋನ ಸೋಂಕಿನಿಂದಾಗಿ ಜನಸಾಮಾನ್ಯರ ಬದುಕು ದಯನೀಯ ಸ್ಥಿತಿಯಲ್ಲಿದ್ದು, ಈ ಸಮಯದಲ್ಲಿ ವಿದ್ಯುತ್ ದರ ಹೆಚ್ಚಿಸುವ ಸರಕಾರದ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಸೋಮವಾರ ಇಲ್ಲಿನ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೊರೋನ ಪಿಡುಗಿನಿಂದ ದೇಶ ತತ್ತರಿಸಿದೆ. ಈ ಸಮಯದಲ್ಲಿ ಎಲ್ಲರೂ ಮಾನವೀಯತೆಗೆ ಗೌರವ ತೋರಿ ನಡೆದುಕೊಳ್ಳುತ್ತಿದ್ದಾರೆ. ಸರಕಾರಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇವೆ. ಈ ಸಮಸ್ಯೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಉದ್ಯಮ ನಡೆಸುತ್ತಿರುವವರಿಂದ ಸಣ್ಣ ವ್ಯಾಪಾರಿಗಳವರೆಗೂ, ಉದ್ಯೋಗದಾತರಿಂದ ಉದ್ಯೋಗಿಗಳವರೆಗೂ, ಪ್ರತಿ ವರ್ಗದ ಜನ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಜನ ಕೆಲಸ ಇಲ್ಲದೆ, ಆದಾಯ ಇಲ್ಲದೆ ಕಂಗಾಲಾಗಿದ್ದಾರೆ. ಜನರ ನೆರವಿಗಾಗಿ ಕೇಂದ್ರ ಸರಕಾರ 20 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಲ್ಲಿ ಯಾರಿಗೆ ಸಹಾಯವಾಗಿದೆ ಎಂದು ಕೇಳಿದ್ದೆವು. ಆದರೆ, ಸರಕಾರ ಇದನ್ನು ತಿಳಿಸಲಿಲ್ಲ.
ಈ ಸಮಯದಲ್ಲಿ ಪಾಲಿಕೆ, ಪಂಚಾಯತ್ ಮಟ್ಟದಲ್ಲಿ ಒಂದು ವರ್ಷ ಆಸ್ತಿ ತೆರಿಗೆ ರದ್ದು ಮಾಡಿ ಎಂದು ಕೇಳಿದೆವು. ಇದಕ್ಕೆ ಸರಕಾರ ಸ್ಪಂದಿಸಲಿಲ್ಲ. ಈ ಮಧ್ಯೆ ಎಲ್ಲ ವಹಿವಾಟಿಗೂ ಸರಕಾರ ನಿರ್ಬಂಧ ಹೇರಿತ್ತು. ಎಲ್ಲರೂ ಇದಕ್ಕೆ ಸಹಕಾರ ನೀಡಿದ್ದರು.
ರಾಜ್ಯದಲ್ಲಿ ಮಳೆ ಹೆಚ್ಚಾದಾಗ ಹಾಗೂ ಸೌರಶಕ್ತಿಯಿಂದ ವಿದ್ಯುತ್ ಹೆಚ್ಚಾಗಿ ಉತ್ಪಾದನೆ ಮಾಡುವುದನ್ನು ನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಿಸಲು ಸರಕಾರ ಕೆಇಆರ್‍ಸಿಗೆ ತಿಳಿಸಿತ್ತು. ಪ್ರತಿ ಯೂನಿಟ್‍ಗೆ 40 ಪೈಸೆ ಹೆಚ್ಚಿಸಿದೆ. ನಾನು ಪಕ್ಷ, ರಾಜ್ಯದ ಆರೂವರೆ ಕೋಟಿ ಜನರ ಪರವಾಗಿ, ಈ ಜನ ವಿರೋಧಿ ನಿರ್ಧಾರವನ್ನು ಖಂಡಿಸುತ್ತೇನೆ. ಇದು ಕೈಗಾರಿಕೆ, ವ್ಯಾಪಾರಿ, ರೈತರು ಹಾಗೂ ಮಧ್ಯಮ ವರ್ಗದ ಜನರ ವಿರುದ್ಧ ಈ ತೀರ್ಮಾನ ಕೈಗೊಳ್ಳಲಾಗಿದೆ. ಸರಕಾರ ಕೂಡಲೇ ಈ ನಿರ್ಧಾರ ಕೈಬಿಡಬೇಕು. ಮುಂದಿನ ಒಂದೂವರೆ ವರ್ಷಗಳ ಕಾಲ ಇಂತಹ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಜನರ ಧ್ವನಿಯಾಗಿ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ. ಈಗ ಇರುವ ದರವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ: ಮಳೆ ಹೆಚ್ಚಾಗಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವ ಹೊತ್ತಲ್ಲಿ ಸರಕಾರ ವಿದ್ಯುತ್ ದರ ಕಡಿಮೆ ಮಾಡಬಹುದಿತ್ತು. ಆದರೆ, ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ವೇಳೆ ಸರಕಾರ ಈ ನಿರ್ಧಾರ ಒಂದು ವಾರದ ಒಳಗಾಗಿ ಕೈಬಿಡದಿದ್ದರೆ, 17ರಿಂದ 20ರ ವರೆಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಎಸ್ಕಾಂ ಸಂಸ್ಥೆಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜತೆಗೆ 23 ರಿಂದ 28ರ ವರೆಗೆ ಒಂದು ದಿನ ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ. ಬಿ.ಎಲ್.ಶಂಕರ್, ಸಹ ಅಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.







