ಎಸ್ ಡಿಪಿಐ ಜೊತೆ ಹೊಂದಾಣಿಕೆ ಮಾಡಿ ಅಧಿಕಾರ ಗಿಟ್ಟಿಸಿಕೊಂಡ ಕಾಂಗ್ರೆಸ್: ಹರಿಕೃಷ್ಣ ಬಂಟ್ವಾಳ್ ಆರೋಪ
ಬಂಟ್ವಾಳ, ನ.9: ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಮಾಡುವುದಿಲ್ಲ ಎಂದು ಚುನಾವಣಾ ಪೂರ್ವದಲ್ಲಿ ಹೇಳಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಕೊನೆಗೆ ಎಸ್ ಡಿಪಿಐ ಜೊತೆ ಗುಪ್ತವಾಗಿ ಹೊಂದಾಣಿಕೆ ಮಾಡಿ ಬಂಟ್ವಾಳ ಪುರಸಭೆಯ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂದು ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಸೋಮವಾರ ಬಿ.ಸಿ.ರೋಡ್ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಬಿಜೆಪಿ 11 ಸ್ಥಾನ ವಿದ್ದು ಸಂಸದ ಹಾಗೂ ಶಾಸಕರ ಮತದಿಂದ 13 ಸ್ಥಾನ ಪಡೆದು ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದ್ದೆವು. ಆದರೆ ಕಾಂಗ್ರೆಸ್ ಮತ್ತು ಎಸ್ ಡಿಪಿಐ ರಾತೋರಾತ್ರಿ ಒಪ್ಪಂದ ಮಾಡಿ ಅಧಿಕಾರ ಹಿಡಿದಿದೆ ಎಂದು ಆರೋಪಿಸಿದರು.
ಅಧ್ಯಕ್ಷ , ಉಪಾಧ್ಯಕ್ಷೆ ಎರಡೂ ಸ್ಥಾನವನ್ನು ಅಲ್ಪಸಂಖ್ಯಾತ ಸಮುದಾಯದ ಪಾಲಾಗಿದೆ. ಕಾಂಗ್ರೆಸ್ ನಲ್ಲಿ ಹಿಂದೂ ಸದಸ್ಯರು ಯಾರೂ ಇಲ್ಲವೇ? ಒಂದು ಸ್ಥಾನವನ್ನು ಹಿಂದೂಗಳಿಗೆ ಕೊಡಬಹುದಾಗಿತ್ತು. ಆದರೆ ಇಲ್ಲಿ ಕೂಡ ವಂಚಿಸಲಾಗಿದೆ. ಸ್ವಾಭಿಮಾನವಿದ್ದರೆ ಕಾಂಗ್ರೆಸ್ ನ ಹಿಂದೂಗಳು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬರಲಿ. ಕಾಂಗ್ರೆಸ್ ಬಿಟ್ಟು ಬಂದರೆ ಬಿಜೆಪಿಯಲ್ಲಿ ಟಿಕೆಟ್ ಕೊಡಿಸಿ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ದೇವಪ್ಪ ಪೂಜಾರಿ, ದೇವದಾಸ ಶೆಟ್ಟಿ, ಡೊಂಬಯ ಅರಳ, ಸುದರ್ಶನ್ ಬಜ, ರಂಜಿತ್ ಮೈರ, ಲೋಕೇಶ್ ಎರ್ಮೆನಾಡು, ಜಯರಾಮ ನಾಯ್ಕ, ಚಿದಾನಂದರೈ, ಚಂದ್ರಾವತಿ ಕರಿಯಂಗಳ, ಪುರುಷೋತ್ತಮ ಶೆಟ್ಟಿ, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ, ಭಾರತಿ ಚೌಟ, ಹರ್ಷಿಣಿ, ಮಹೇಶ್ ಶೆಟ್ಟಿ, ಧನಂಜಯ ಶೆಟ್ಟಿ ಮೊದಲಾದವರಿದ್ದರು.