ಪಾಣೆಮಂಗಳೂರು ಸೇತುವೆಯಿಂದ ನದಿಗೆ ಹಾರಿದ ಯುವಕನ ಮೃತದೇಹ ಪತ್ತೆ

ಬಂಟ್ವಾಳ : ಪಾಣೆಮಂಗಳೂರು ಸೇತುವೆಯಿಂದ ರವಿವಾರ ಬೆಳಗ್ಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದ ವ್ಯಕ್ತಿಯ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿದೆ.
ಪುತ್ತೂರು ತಾಲೂಕಿನ ಬಲ್ನಾಡು ಕಾಂತಿಲ ನಿವಾಸಿ ಸುಚೇತನ್ (27) ಆತ್ಮಹತ್ಯೆ ಮಾಡಿದ್ದ ಯುವಕ.
ಮಂಗಳೂರಿನ ಪಿಜಿಯಲ್ಲಿ ಇದ್ದ ಈತ ಬಿ.ಸಿ.ರೋಡ್ ಸಮೀಪದ ಪಾಣೆಮಂಗಳೂರು ಹೊಸ ಸೇತುವೆಯಿಂದ ನದಿಗೆ ಹಾರಿದ್ದ. ಹಾರುವ ಸಂದರ್ಭದಲ್ಲಿ ತನ್ನಲ್ಲಿದ್ದ ಬ್ಯಾಗ್ ಅನ್ನು ಸೇತುವೆ ಮೇಲಿಟ್ಟು ಹಾರಿದ್ದ. ಇದನ್ನು ಕಂಡ ಕಾರೊಂದರಲ್ಲಿ ಪ್ರಯಣಿಸುತ್ತಿದ್ದ ಪ್ರಯಣಿಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಯುವಕನ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ದೊರೆತ ಆಧಾರ್ ಕಾರ್ಡ್, ವೋಟರ್ ಐಡಿಯ ಆಧಾರದಲ್ಲಿ ಯುವಕನ ಪರಿಚಯವನ್ನು ಪೊಲೀಸರು ಪತ್ತೆ ಹಚ್ಚಿದ್ದು ಬಳಿಕ ಮನೆಯವರಿಗೆ ತಿಳಿಸಿ ಸ್ಥಳಕ್ಕೆ ಕರೆಯಲಾಗಿತ್ತು. ರವಿವಾರ ಸಂಜೆಯವರೆಗೆ ಯುವಕನಿಗಾಗಿ ಸ್ಥಳೀಯ ಯುವಕರು ಹಾಗೂ ಅಗ್ನಿ ಶಾಮಕ ದಳದವರು ಶೋಧ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ರಾತ್ರಿಯಾಗುತ್ತಿದ್ದಂತೆ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.
ಸೋಮವಾರ ಮತ್ತೆ ಶೋಧ ಕಾರ್ಯ ಆರಂಭಿಸಿದ್ದು ಸಂಜೆಯ ವೇಳೆಗೆ ಅದೇ ಸೇತುವೆಯ ಕೆಳಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







