ಟ್ರಂಪ್ ‘ಶತ್ರು’ಗಳಿಗೆ ಕಿರುಕುಳ ನೀಡಬಹುದು!
ಬೈಡನ್ ಆಡಳಿತ ನಡೆಸಲು ಕಷ್ಟವಾಗುವಂತೆ ಅಡ್ಡಗಾಲು ಹಾಕುವ ಸಾಧ್ಯತೆ: ರಾಜಕೀಯ ವಿಶ್ಲೇಷಕರ ಅಭಿಪ್ರಾಯ

ವಾಶಿಂಗ್ಟನ್, ನ. 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಆಗದಿರಬಹುದು. ಆದರೆ, ಅವರ ಅಧ್ಯಕ್ಷೀಯ ಅವಧಿ ಇನ್ನೂ ಇದೆ ಹಾಗೂ ಇತರರಿಗೆ ಸಂಕಷ್ಟ ಉಂಟು ಮಾಡುವ ಸಾಮರ್ಥ್ಯವಂತೂ ಪೂರ್ಣ ಪ್ರಮಾಣದಲ್ಲಿದೆ.
ಇನ್ನುಳಿದ ಎರಡು ತಿಂಗಳ ಅಧ್ಯಕ್ಷೀಯ ಅವಧಿಯಲ್ಲಿ ಅವರ ಪ್ರತೀಕಾರಾತ್ಮಕ ಕ್ರಮಗಳು ಮತ್ತು ಸರಕಾರಿ ಆದೇಶಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಬಹುದು. ನಿಯೋಜಿತ ಅಧ್ಯಕ್ಷ ಜೋ ಬೈಡನ್‌ಗೆ ಆಡಳಿತ ನಡೆಸಲು ಕಷ್ಟವಾಗುವ ರೀತಿಯಲ್ಲಿ ಅವರು ಕಾರ್ಯನಿರ್ವಹಿಸಬಹುದು.
ಓವಲ್ ಕಚೇರಿಯಲ್ಲಿನ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸುವಂಥ ಕೆಲಸಗಳನ್ನು ಬಹುತೇಕ ಎಲ್ಲ ಅಧ್ಯಕ್ಷರು ಮಾಡಿದ್ದಾರೆ. ಆದರೆ, ಅಧ್ಯಕ್ಷೀಯ ಹುದ್ದೆ ಮತ್ತು ಕೇಂದ್ರ ಸರಕಾರದ ಘನತೆಯನ್ನು ಕುಗ್ಗಿಸುವಂಥ ಕೆಲಸಗಳನ್ನು ಮಾಡಿದವರು ತೀರಾ ವಿರಳ.
ಮುಂದಿನ ವರ್ಷದ ಜನವರಿ 20ರ ಮಧ್ಯಾಹ್ನ ಶ್ವೇತಭವನವನ್ನು ತೊರೆಯುವ ಮೊದಲು, ಶತ್ರುಗಳೆಂದುಕೊಂಡವರನ್ನು ವಜಾಗೊಳಿಸಬಹುದು ಅಥವಾ ಅವರಿಗೆ ಕಿರುಕುಳ ನೀಡಬಹುದು ಹಾಗೂ ಮಿತ್ರರಿಗೆ ಕ್ಷಮಾದಾನ ನೀಡಬಹುದು. ಒಮ್ಮೆ ಅಧ್ಯಕ್ಷರು ನಿರ್ಗಮನ ಅಧ್ಯಕ್ಷರಾಗಿ ಬದಲಾದಾಗ, ಕಾರ್ಯಾಂಗದ ಅಧಿಕಾರಗಳನ್ನು ಚಲಾಯಿಸುವ ಅವರ ಅಧಿಕಾರಗಳ ಮೇಲೆ ಹೆಚ್ಚಿನ ನಿರ್ಬಂಧವಿರುವುದಿಲ್ಲ ಎಂದು ಸೌತ್ ವೆಸ್ಟರ್ನ್ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದ ಪ್ರೊಫೆಸರ್ ಆಗಿರುವ ಎಮಿಲಿ ಸೈಡ್ನರ್ ಹೇಳುತ್ತಾರೆ.
ಇನ್ನೊಮ್ಮೆ ಮತದಾರರನ್ನು ಎದುರಿಸುವ ಹೆದರಿಕೆ ಅವರಿಗೆ ಇರುವುದಿಲ್ಲ. ಹಾಗಾಗಿ, ಅಧ್ಯಕ್ಷೀಯ ವರ್ತನೆಗಳ ಪರಂಪರೆಯೊಂದೇ ಟ್ರಂಪ್ ಮೇಲೆ ಇರುವ ಏಕೈಕ ಸಂಭಾವ್ಯ ನಿರ್ಬಂಧವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಅಧ್ಯಕ್ಷರಾಗಿ ಟ್ರಂಪ್ ತನ್ನ ತೆರಿಗೆ ವಿವರಗಳನ್ನು ಸಾರ್ವಜನಿಕರಿಗೆ ಒದಗಿಸಲು ನಿರಾಕರಿಸಿದ್ದಾರೆ, ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ತನಿಖೆ ನಡೆಸುವುದಕ್ಕಾಗಿ ಕಾನೂನು ಇಲಾಖೆಯನ್ನು ಛೂಬಿಟ್ಟಿದ್ದಾರೆ, ನಾಲ್ಕು ವರ್ಷಗಳಲ್ಲಿ ಮೂವರು ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರನ್ನು ಬದಲಾಯಿಸಿದ್ದಾರೆ ಹಾಗೂ ಯುರೋಪ್ ಮತ್ತು ಪೆಸಿಫಿಕ್ ದೇಶಗಳೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ. ಅವರ ಹಿಂದಿನ ಅಧ್ಯಕ್ಷರು ಇಂಥ ಕೃತ್ಯಗಳಲ್ಲಿ ತೊಡಗಿಕೊಂಡಿಲ್ಲ.
ಜೋ ಬೈಡನ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಟ್ರಂಪ್ ಯುಕ್ರೇನ್ ಸರಕಾರದ ಮೇಲೆ ಒತ್ತಡ ಹೇರಿದ್ದರು. ಅದಕ್ಕಾಗಿ ಅವರು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ವಾಗ್ದಂಡನೆಗೂ ಒಳಗಾದರು. ಈಗ ಅದೇ ಬೈಡನ್, ಟ್ರಂಪ್‌ರನ್ನು ಪದಚ್ಯುತಗೊಳಿಸಿ ಅವರ ಸ್ಥಾನವನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ.







